LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS: ವಿಶ್ವವಿಖ್ಯಾತ ಮೈಸೂರು ದಸರಾ–2026ರ ಅಧಿಕೃತ ಆಮಂತ್ರಣ ಪತ್ರಿಕೆ ಬಿಡುಗಡೆ: ಅ.11 ರಿಂದ 21ರವರೆಗೆ ಸಾಂಸ್ಕೃತಿಕ ವೈಭವ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ‘ಮೈಸೂರು ದಸರಾ ಮಹೋತ್ಸವ–2026’ಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ಪತ್ರಿಕೆ ಹಾಗೂ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದೆ. ಶರನ್ನವರಾತ್ರಿಯ ಈ ಸಾಂಸ್ಕೃತಿಕ ಮಹೋತ್ಸವವು ಅಕ್ಟೋಬರ್ 11 ರಿಂದ 21ರವರೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಕೊಪ್ಪಳದ ಗವಿಶ್ರೀಗಳಿಂದ ಅ.11ರಂದು ದಸರಾ ಉದ್ಘಾಟನೆ

ಅಕ್ಟೋಬರ್ 11ರ ಭಾನುವಾರ ಬೆಳಗ್ಗೆ 11:50 ರಿಂದ 12:13 ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ನಾಡದೇವತೆಯ ಅಗ್ರಪೂಜೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಶ್ರೀ ಮ.ನಿ.ಪ್ರ.ಜ. ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ವಹಿಸಲಿದ್ದಾರೆ.

ಸಾಂಸ್ಕೃತಿಕ ಸಂಭ್ರಮ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ

ಅ. 11ರ ಸಂಜೆ 5:00 ಗಂಟೆಗೆ ಮೈಸೂರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಪ್ರತಿಷ್ಠಿತ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ’ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ವಿಧಾನಸಭಾ ಅಧ್ಯಕ್ಷ ಜಿ.ಎಸ್. ಪಾಟೀಲ್ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಉಪಸ್ಥಿತರಿರಲಿದ್ದಾರೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳು ಮತ್ತು ದಿನಾಂಕವಾರು ವಿವರ

  • ಅಕ್ಟೋಬರ್ 11 (ಭಾನುವಾರ): ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ಲಿಂಗಾಂಬುಧಿ ತೋಟದ ಉದ್ಘಾಟನೆ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ದೇವರಾಜ ಅರಸ್ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ, ಪುಸ್ತಕ ಮೇಳ, ಲಲಿತಕಲೆ ಮತ್ತು ಕರಕುಶಲ ಶಿಬಿರ, ಸಿ.ಎಂ ಕಪ್ ಕ್ರೀಡಾಕೂಟ ಹಾಗೂ ಸಂಜೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರದ ‘ಹಸಿರು ಚಪ್ಪರ’ ಮತ್ತು ಅರಮನೆ ಆವರಣದಲ್ಲಿ ರುಕ್ಮಿಣಿ ವಿಜಯಕುಮಾರ್ ಮತ್ತು ತಂಡದಿಂದ ‘ದೇವಿ’ ನೃತ್ಯರೂಪಕ.

  • ಅಕ್ಟೋಬರ್ 12 (ಸೋಮವಾರ): ಅರಮನೆ ವೇದಿಕೆಯಲ್ಲಿ ಖ್ಯಾತ ಗಾಯಕ ರಘು ದೀಕ್ಷಿತ್ ಮತ್ತು ತಂಡದಿಂದ ಸಮಕಾಲೀನ ತತ್ವ ಸಂಗೀತ ಸಂಜೆ.

  • ಅಕ್ಟೋಬರ್ 13 (ಮಂಗಳವಾರ): ರಂಗೋಲಿ ಸ್ಪರ್ಧೆ, ವೈದೇಹಿ ಅವರಿಂದ ದಸರಾ ಕವಿಗೋಷ್ಠಿ ಉದ್ಘಾಟನೆ, ಮಹಿಳಾ ದಸರಾ, ಡಾ. ಮುಖ್ಯಮಂತ್ರಿ ಚಂದ್ರು ಅವರಿಂದ ಹಾಸ್ಯ/ಚುಟುಕು ಕವಿಗೋಷ್ಠಿ, ಉತ್ತನಹಳ್ಳಿಯಲ್ಲಿ ಪ್ರಭುದೇವ ಹಾಗೂ ಅಜನೀಶ್ ಲೋಕನಾಥ್ ಉಪಸ್ಥಿತಿಯಲ್ಲಿ ಯುವ ದಸರಾ, ಅರಮನೆಯಲ್ಲಿ ಅಜಯ್ ವಾರಿಯರ್ ಮತ್ತು ಅನುರಾಧಾ ಭಟ್ ಅವರಿಂದ ‘ಸ್ವರಯಾನ’ ಗಾಯನ.

  • ಅಕ್ಟೋಬರ್ 14 (ಬುಧವಾರ): ಯೋಗ ದಸರಾ, ಯುವ ಕವಿಗೋಷ್ಠಿ, ಮಕ್ಕಳ ದಸರಾ, ಉತ್ತನಹಳ್ಳಿಯಲ್ಲಿ ಶಂಕರ್-ಎಹ್ಸಾನ್-ಲಾಯ್ ಸಂಗೀತ ತಂಡದಿಂದ ಯುವ ದಸರಾ ಹಾಗೂ ಅರಮನೆ ವೇದಿಕೆಯಲ್ಲಿ ‘ಕ್ಲಾಸಿಕಲ್ ಫ್ಯೂಷನ್ ಆಕ್ಟ್’.

  • ಅಕ್ಟೋಬರ್ 15 (ಗುರುವಾರ): ಪಾರಂಪರಿಕ ನಡಿಗೆ, ಚಿಗುರು ಕವಿಗೋಷ್ಠಿ, ಯುವ ದಸರಾದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಸಂಗೀತ ಸಂಜೆ ಹಾಗೂ ಅರಮನೆಯಲ್ಲಿ ಸ್ಟಕ್ಯಾಟೋ ತಂಡದಿಂದ ಫ್ಯೂಷನ್ ಸಂಗೀತ.

  • ಅಕ್ಟೋಬರ್ 16 (ಶುಕ್ರವಾರ): ಪಾರಂಪರಿಕ ಸೈಕಲ್ ಸವಾರಿ, ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ, ರೈತ ದಸರಾ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ, ಜನಪದ ಕಾವ್ಯಗೋಷ್ಠಿ, ಕೃಷಿ ವಸ್ತು ಪ್ರದರ್ಶನ, ಯುವ ದಸರಾದಲ್ಲಿ ‘ಸ್ಯಾಂಡಲ್‌ವುಡ್ ನೈಟ್ಸ್’ ಹಾಗೂ ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ವಾದನ.

  • ಅಕ್ಟೋಬರ್ 17 (ಶನಿವಾರ): ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿ, ಪ್ರಧಾನ ಕವಿಗೋಷ್ಠಿ, ಕುಸ್ತಿ ಮುಕ್ತಾಯ ಸಮಾರಂಭ, ಯುವ ದಸರಾದಲ್ಲಿ ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಕಾರ್ಯಕ್ರಮ, ಅರಮನೆ ವೇದಿಕೆಯಲ್ಲಿ ಮುಂಬೈನ ಖ್ಯಾತ ಗಾಯಕ ಶಾನ್ ಮತ್ತು ತಂಡದಿಂದ ಸಂಗೀತ ಸಂಜೆ ಹಾಗೂ ಬನ್ನಿಮಂಟಪದಲ್ಲಿ ಡ್ರೋನ್ ಪ್ರದರ್ಶನ.

  • ಅಕ್ಟೋಬರ್ 18 (ಭಾನುವಾರ): ಗ್ರಾಮೀಣ ಯೋಗ ದಸರಾ (ನಂಜನಗೂಡು), ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಸಾತಗಳ್ಳಿಯಲ್ಲಿ ‘ಕಂಬಳ: ಕೋಣಗಳ ಸ್ಪರ್ಧೆ’ ಉದ್ಘಾಟನೆ, ಅರಮನೆ ವೇದಿಕೆಯಲ್ಲಿ ಇನ್‌ಸ್ಟ್ರುಮೆಂಟಲ್ ಫ್ಯೂಷನ್ ಹಾಗೂ ಬನ್ನಿಮಂಟಪದಲ್ಲಿ ಡ್ರೋನ್ ಶೋ.

  • ಅಕ್ಟೋಬರ್ 19 (ಸೋಮವಾರ): ಚಾಮುಂಡಿ ಬೆಟ್ಟದಲ್ಲಿ ಯೋಗ ಚಾರಣ ಹಾಗೂ ಕಂಬಳ ಸ್ಪರ್ಧೆಯ ಬಹುಮಾನ ವಿತರಣೆ.

  • ಅಕ್ಟೋಬರ್ 20 (ಮಂಗಳವಾರ): ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಪೂರ್ವಾಭ್ಯಾಸ (ರಿಹರ್ಸಲ್).

ಅಕ್ಟೋಬರ್ 21: ವಿಶ್ವವಿಖ್ಯಾತ ಜಂಬೂಸವಾರಿ ಹಾಗೂ ಪಂಜಿನ ಕವಾಯತು

ವಿಜಯದಶಮಿಯ ದಿನವಾದ ಅಕ್ಟೋಬರ್ 21ರ ಬುಧವಾರದಂದು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.

  • ನಂದಿಧ್ವಜ ಪೂಜೆ: ಮಧ್ಯಾಹ್ನ 1:36 ರಿಂದ 1:56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುವುದು.

  • ವಿಜಯದಶಮಿ ಮೆರವಣಿಗೆ (ಜಂಬೂಸವಾರಿ): ಸಂಜೆ 4:10 ರಿಂದ 4:35 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆ ಒಳಾವರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾಯಿ ಚಾಮುಂಡೇಶ್ವರಿಯ ವಿಗ್ರಹ ಹೊತ್ತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತರಿರಲಿದ್ದಾರೆ.

  • ಪಂಜಿನ ಕವಾಯತು (ಟಾರ್ಚ್ ಲೈಟ್ ಪೆರೇಡ್): ಅಂದು ಸಂಜೆ 7:00 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ದಸರಾ ಮಹೋತ್ಸವದ ಸಮಾರೋಪ ಅಂಗವಾಗಿ ಆಕರ್ಷಕ ಪಂಜಿನ ಕವಾಯತು ನಡೆಯಲಿದ್ದು, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹಲೋತ್ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ.

ನಾಯಕರ ಶುಭ ಸಂದೇಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ನಾಡಿನ ಜನತೆಗೆ ದಸರಾ ಹಬ್ಬದ ಶುಭ ಹಾರೈಸಿದ್ದು, "ಮೈಸೂರು ದಸರಾ ನಾಡಿನ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ಪ್ರತೀಕವಾಗಿದೆ. ಈ ಸಾಂಸ್ಕೃತಿಕ ಮಹೋತ್ಸವವು ನಾಡಿನಲ್ಲಿ ಸೌಹಾರ್ದತೆ, ಸಮೃದ್ಧಿ, ಸಹಬಾಳ್ವೆ ಹಾಗೂ ಶಾಂತಿಯನ್ನು ತರಲಿ" ಎಂದು ತಮ್ಮ ಸಂದೇಶದಲ್ಲಿ ಆಶಿಸಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ಕ್ಕೆ ದೇಶ-ವಿದೇಶಗಳ ಸಮಸ್ತ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತವು ಆತ್ಮೀಯ ಸ್ವಾಗತ ಕೋರಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜಕೀಯ ಲೇಪವಿಲ್ಲದೆ ವೈಭವದಿಂದ ಮೈಸೂರು ದಸರಾ ನಡೆಯಬೇಕು: ಸಿಎಂ ಡಿ ಕೆ ಶಿವಕುಮಾರ್ತಿಂಗಳಿಗೆ 1.8 ಲಕ್ಷ ರೂ. ವೆಚ್ಚ ; ದುಬೈ ಜೀವನಶೈಲಿ ಮತ್ತು ದಿನನಿತ್ಯದ ಖರ್ಚು ಬಿಚ್ಚಿಟ್ಟ ಮಹಿಳೆ !JOB ALERT: ಪೋಷಣ್ ಅಭಿಯಾನ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಗಣೇಶ್ ನಚಿಕೇತು ನೇಮಕಾತಿ ವರದಿ ಸುಳ್ಳು: ರಾಜ್ಯ ಸರ್ಕಾರ ಸ್ಪಷ್ಟನೆಖಾರಿಫ್ ಬರ ಪರಿಸ್ಥಿತಿ ಅಧ್ಯಯನ: ರಾಜ್ಯಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ  ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗೆ 14 ದಿನ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ಪ್ರವಾಸಿ ತಾಣಗಳಲ್ಲಿ ‘ಮಯೂರ ರುಚಿ ಆನ್ ವೀಲ್ಸ್'; ಪ್ರವಾಸಿಗರ ಬಳಿಗೇ ಮಯೂರ ಹೋಟೆಲ್‌ಗಳ ರುಚಿ ಎಂದ ಸಚಿವ ಕೆ.ಜೆ. ಜಾರ್ಜ್ಹೊಸ ಮನೆಗೆ ಬದಲಾದಿರಾ ? ಆಧಾರ್ – PAN ಕಾರ್ಡ್‌ನಲ್ಲಿ ವಿಳಾಸ ಬದಲಾಯಿಸಲು ಹೀಗಿದೆ ಸುಲಭ ವಿಧಾನ !ಕುಟುಂಬದ ನಾಲ್ವರನ್ನು ಹತ್ಯೆಗೈದ ಪಾಪಿ ಪುತ್ರ: ಹಲ್ಲೆಗೊಳಗಾದ ನಾಲ್ವರು ಆಸ್ಪತ್ರೆಗೆ ದಾಖಲುBREAKING: ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಘೋರ ದುರಂತ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಸಾವು