ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಡಬಲ್ ಸೆಂಚೂರಿ ಬಾರಿಸಿರುವ ಬಿಜೆಪಿ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ರಚನೆಗೆ ಮುಂದಾಗಿದೆ. 206 ಸ್ಥಾಳಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಬಂಗಾಳದಲ್ಲಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಮೇ 9 ರಂದು ಬಿಜೆಪಿ ಸರ್ಕಾರ ಅಧಿಅಕರಕ್ಕೆ ಬರಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೇ 8 ರಂದು ಕೋಲ್ಕತ್ತಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ನೂತನ ಸಿಎಂ ಹೆಸರು ಘೋಷಣೆಯಾಗಲಿದೆ.
ಬಳಿಕ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮೇ 9 ರಂದು ಬೆಳಿಗ್ಗೆ 11 ಗಂಟೆಗೆ ಬಂಗಾಳದಲ್ಲಿ ಬಿಜೆಪಿಯ ಮೊದಲ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಖ್ಯಮಂತ್ರಿ ರೇಸ್ ನಲ್ಲಿ ಹಲವು ನಾಯಕರ ಹೆಸರು ಕೇಳಿಬರುತ್ತಿದೆ. ಬಂಗಾಳದಲ್ಲಿ ಇತಿಹಾಸ ಸೃಷ್ಟಿಸಿರುವ ಬಿಜೆಪಿಯ ಮೊದಲ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲವೂ ಮೂಡಿದೆ. ಬಿಜೆಪಿ ತನ್ನ ಪ್ರಚಾರದಲ್ಲಿ ಮಹಿಳಾ ಭದ್ರತೆಯನ್ನು ಮುಂಚೂಣಿಯಲ್ಲಿಟ್ಟುಕೊಂಡಿರುವುದರಿಂದ ಕೇಸರಿ ಪಕ್ಷವು ಮಹಿಳಾ ಮುಖ್ಯಮಂತ್ರಿಯನ್ನು ನೇಮಿಸಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಮಹಿಳಾ ಮೀಸಲಾತಿ ಕಾಯ್ದೆಯ ಗೊಂದಲದ ನಂತರ ಬಿಜೆಪಿ ತನ್ನ ಮಹಿಳಾ ಪರ ಇಮೇಜ್ ಅನ್ನು ಉಳಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಬಂಗಾಳದ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ರಾಜ್ಯಾಧ್ಯಕ್ಷರ ಹೆಸರುಗಳು ಕೂಡ ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿವೆ.
ಬಂಗಾಳದ ಸಿಎಂ ರೇಸ್ ನಲ್ಲಿರುವ ನಾಯಕರು:
ಸುವೆಂಧು ಅಧಿಕಾರಿ ಅವರ ಹೆಸರು ಸಿಎಂ ರೇಸ್ ನಲ್ಲಿ ಕೇಳಿಬರುತ್ತಿದೆ. ಟಿಎಂಸಿಯ ಮಾಜಿ ನಾಯಕ ಮತ್ತು ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಟಿಎಂಸಿ ತಿರೆದು ಬಿಜೆಪಿ ಸೇರಿ ರಾಜ್ಯಾಧ್ಯಕ್ಷರಾಗಿದ್ದರು. 2021ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಅವರು ಟಿಎಂಸಿಯಿಂದ ಹೊರಬಂದು ಬಿಜೆಪಿ ಸೇರಿದರು. ಅವರನ್ನು ಸಿಎಂ ಸ್ಥಾನದ ಪ್ರಬಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ನಾಯಕನಾಗಿರುವ ಸುವೇಂದು ಅಧಿಕಾರಿ, 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಗಮನ ಸೆಳೆದಿದ್ದರು.
ಸಮಿಕ್ ಭಟ್ಟಾಚಾರ್ಯ- ಹೊಸದಾಗಿ ನೇಮಕಗೊಂಡ ಬಂಗಾಳದ ಬಿಜೆಪಿ ಮುಖ್ಯಸ್ಥರಾದ ಸಮಿಕ್ ಭಟ್ಟಾಚಾರ್ಯ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. ತೆರೆಮರೆಯಲ್ಲಿ ಕೆಲಸ ಮಾಡಲು ಹೆಸರುವಾಸಿಯಾದ ಭಟ್ಟಾಚಾರ್ಯ ಅವರು ಬಿಜೆಪಿಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖರಾಗಿದದರೆ.
ಅಗ್ನಿಮಿತ್ರ ಪಾಲ್- ಫ್ಯಾಷನ್ ಡಿಸೈನರ್ ಆಗಿರುವ ಅಗ್ನಿಮಿತ್ರ ಪಾಲ್, ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ಬಿಜೆಪಿ ಮಹಿಳಾ ಮೋರ್ಚಾದ ಬಂಗಾಳ ಘಟಕದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದ ಇವರು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗುವ ಮೂಲಕ ಪ್ರಮುಖ ಹುದ್ದೆಯಲ್ಲಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿಂದ ಪದವೀಧರೆಯಾಗಿರುವ ಅಗ್ನಿಮಿತ್ರ ಪಾಲ್ ಹೆಸರು ಸಂಭಾವ್ಯ ಸಿಎಂ ಪಟ್ಟಿಯಲ್ಲಿದೆ
ರೂಪಾ ಗಂಗೂಲಿ- ಬಿಆರ್ ಚೋಪ್ರಾ ಅವರ ಮಹಾಭಾರತದಲ್ಲಿ ದ್ರೌಪದಿ ಪಾತ್ರದ ಮೂಲಕ ಪ್ರಸಿದ್ಧಿ ಪಡೆದಿದ್ದ ರೂಪಾ ಗಂಗೂಲಿ, ಬಿಜೆಪಿಯ ಮತ್ತೊಬ್ಬ ಜನಪ್ರಿಯ ಮಹಿಳಾ ನಾಯಕಿ. ರಾಜ್ಯಸಭಾ ಸಂಸದೆಯೂ ಆಗಿದ್ದಾರೆ. ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಎರಡು ವರ್ಷಗಳ ಅವಧಿಯಿಂದಾಗಿ ಜನಸಾಮಾನ್ಯರ ಸಂಪರ್ಕವನ್ನು ಹೊಂದಿದ್ದಾರೆ. ಅವರ ಹೆಸರು ಕೂಡ ಸಿಎಂ ರೇಸ್ ನಲ್ಲಿದೆ.
ದಿಲೀಪ್ ಘೋಷ್- ಆಕ್ರಮಣಕಾರಿ ರಾಜಕೀಯ ಶೈಲಿ ಮತ್ತು ಜನಸಾಮಾನ್ಯರ ಸಂಪರ್ಕಕ್ಕೆ ಹೆಸರುವಾಸಿಯಾದ ಮಾಜಿ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಅಸ್ತಿತ್ವವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥರಾಗಿಲ್ಲದಿದ್ದರೂ ಇವರು ಬಂಗಾಳದ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಉಳಿದಿದ್ದಾರೆ. ಆರ್‌ಎಸ್‌ಎಸ್ ಹಿನ್ನೆಲೆಯ ದಿಲೀಪ್ ಘೋಷ್ 2014ರಲ್ಲಿ ಬಂಗಾಳ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಸೇರಿದರು.
ಶಂಕರ್ ಘೋಷ್- ಸಿಲಿಗುರಿಯ ಬಿಜೆಪಿ ಶಾಸಕ ಶಂಕರ್ ಘೋಷ್ ಅವರು ಉತ್ತರ ಬಂಗಾಳದ ಪ್ರಮುಖ ಪ್ರಾದೇಶಿಕ ನಾಯಕ. ಅವರ ಪ್ರಭಾವ ರಾಜ್ಯವ್ಯಾಪಿಗಿಂತ ಹೆಚ್ಚು ಪ್ರಾದೇಶಿಕವಾಗಿದೆ. ಅವರ ಹೆಸರು ಕೂಡ ಸಿಎಂ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಉತ್ತರ ಬಂಗಾಳದ ನಾಯಕರಾದ ಇವರು ಸ್ಥಳೀಯ ಮಟ್ಟದಲ್ಲಿ ಸಂಘಟನಾ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.