ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರು ಶುಕ್ರವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದರು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಮಾನ ನಿಲ್ದಾಣದ ಹೊರಭಾಗದಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ವಿಜಯ್‌ರನ್ನು ಕಂಡ ಕೂಡಲೇ ಸಂಭ್ರಮಾಚರಣೆ ನಡೆಸಿದರು.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಅಭಿಮಾನಿಗಳ ದಟ್ಟಣೆ ಹೆಚ್ಚಾಗಿದ್ದರಿಂದ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು. ವಿಜಯ್ ಪರ ಘೋಷಣೆಗಳು ಮೊಳಗಿದರೆ, ಹಲವರು ಅವರೊಂದಿಗೆ ಫೋಟೋ ಹಾಗೂ ವಿಡಿಯೋ ಸೆರೆಹಿಡಿಯಲು ಮುಂದಾದರು.
ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದಾರೆ.ಅವರ ಭೇಟಿ ಹಿನ್ನೆಲೆ ದೇವಸ್ಥಾನ ಹಾಗೂ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೊಲ್ಲೂರು ದೇವಸ್ಥಾನಕ್ಕೆ ತೆರಳಿ ಸಿಎಂ ವಿಜಯ್ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ವಿಜಯ್ ಅವರ ಅಪಾರ ಅಭಿಮಾನಿ ಬಳಗ ಕರ್ನಾಟಕದಲ್ಲಿಯೂ ಇರುವುದರಿಂದ ಅವರ ಆಗಮನ ಎಲ್ಲೆಡೆ ಕುತೂಹಲಕ್ಕೆ ಕಾರಣವಾಯಿತು. ಅಭಿಮಾನಿಗಳ ಸುರಕ್ಷತೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಪೊಲೀಸರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದರು.