ನಿವೃತ್ತಿಯಾದ ಬಳಿಕ ಕೈಯಲ್ಲಿ ದೊಡ್ಡ ಮೊತ್ತದ ಹಣವಿದ್ದರೂ, ಅದನ್ನು ಎಷ್ಟು ದಿನ ಬಳಸಬೇಕು, ತಿಂಗಳ ಖರ್ಚು ಹೇಗೆ ನಿಭಾಯಿಸಬೇಕು ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು, ಔಷಧಿ, ವೈದ್ಯಕೀಯ ವೆಚ್ಚ ಹೀಗೆ ನಿವೃತ್ತ ಜೀವನದ ಜವಾಬ್ದಾರಿಗಳು ಮುಂದುವರಿಯುತ್ತವೆ. ಇಂತಹ ಸಂದರ್ಭದಲ್ಲಿ ಪಿಎಫ್ ಹಣವನ್ನು ಒಂದೇ ಬಾರಿಗೆ ಹಿಂಪಡೆಯುವ ಬದಲು, ಪ್ರತಿ ತಿಂಗಳು ಅಗತ್ಯಕ್ಕೆ ತಕ್ಕಂತೆ ಪಡೆಯುವ ಅವಕಾಶ ಸಿಕ್ಕರೆ ಹೇಗಿರುತ್ತದೆ? ಈ ನಿಟ್ಟಿನಲ್ಲಿ EPFO ಹೊಸ ಯೋಜನೆಯೊಂದರ ಬಗ್ಗೆ ಚಿಂತನೆ ನಡೆಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO), ನಿವೃತ್ತಿಯ ಬಳಿಕ PF ಹಣವನ್ನು ಹಂತ ಹಂತವಾಗಿ ಹಿಂಪಡೆಯಲು ಅವಕಾಶ ನೀಡುವ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್ (SWP) ಜಾರಿಗೆ ತರುವ ಬಗ್ಗೆ ಪರಿಶೀಲಿಸುತ್ತಿದೆ. ಈ ಪ್ರಸ್ತಾವ ಜಾರಿಯಾದರೆ ಸುಮಾರು 6.3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗುವ ಸಾಧ್ಯತೆಯಿದೆ.
ಈ ಯೋಜನೆಯಡಿ ಉದ್ಯೋಗಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ PF ಹಣವನ್ನು ಹಿಂಪಡೆಯುವ ಆಯ್ಕೆ ಪಡೆಯಬಹುದು. ಖಾತೆಯಲ್ಲಿ ಉಳಿದ ಹಣಕ್ಕೆ ಬಡ್ಡಿಯೂ ಮುಂದುವರಿಯುವ ಸಾಧ್ಯತೆಯಿದೆ.
ನಿವೃತ್ತಿಯ ಸಮಯದಲ್ಲಿ ಸಂಪೂರ್ಣ PF ಹಣ ಹಿಂಪಡೆಯಬೇಕಿಲ್ಲ!
ಹೊಸ ವ್ಯವಸ್ಥೆಯಲ್ಲಿ ನಿವೃತ್ತಿಯ ಸಮಯದಲ್ಲಿ PF ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಒಂದೇ ಬಾರಿಗೆ ಹಿಂಪಡೆಯುವ ಅಗತ್ಯವಿಲ್ಲ. ಉದ್ಯೋಗಿಗಳು ತಮ್ಮ ಅಗತ್ಯಕ್ಕೆ ತಕ್ಕಷ್ಟು ಹಣವನ್ನು ಮಾತ್ರ ತೆಗೆದುಕೊಂಡು, ಉಳಿದ ಮೊತ್ತವನ್ನು ಖಾತೆಯಲ್ಲಿ ಉಳಿಸಿಕೊಳ್ಳಬಹುದು.
ನಂತರ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಹಣ ಹಿಂಪಡೆಯುವ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಆರಂಭದಲ್ಲೇ ಒಂದಷ್ಟು ಹಣವನ್ನು ಹಿಂಪಡೆದು, ಉಳಿದ ಹಣವನ್ನು ಖಾತೆಯಲ್ಲಿ ಮುಂದುವರಿಸಬಹುದು. ಇದರಿಂದ ನಿವೃತ್ತಿಯ ನಂತರವೂ ಉಳಿತಾಯದ ಹಣವನ್ನು ದೀರ್ಘಕಾಲ ಬಳಸಿಕೊಳ್ಳಲು ನೆರವಾಗಬಹುದು.
55 ವರ್ಷ ಮೇಲ್ಪಟ್ಟ 6.3 ಲಕ್ಷ ಸದಸ್ಯರಿಗೆ ಪ್ರಯೋಜನ?
ವರದಿಗಳ ಪ್ರಕಾರ, ಆರಂಭಿಕ ಹಂತದಲ್ಲಿ 55 ವರ್ಷ ಮೇಲ್ಪಟ್ಟ ಸುಮಾರು 6.3 ಲಕ್ಷ EPFO ಸದಸ್ಯರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ನಿವೃತ್ತಿಯ ಬಳಿಕ ಒಂದೇ ಬಾರಿಗೆ ದೊಡ್ಡ ಮೊತ್ತ ಖರ್ಚಾಗುವುದನ್ನು ತಪ್ಪಿಸಿ, ನಿಯಮಿತ ಆದಾಯದ ರೀತಿಯಲ್ಲಿ ಹಣ ಬಳಸಲು ಇದು ನೆರವಾಗಬಹುದು.
ಗಿಗ್ ವರ್ಕರ್ಸ್‌ಗೂ PF ಸೌಲಭ್ಯ?
ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಗಿಗ್ ವರ್ಕರ್ಸ್‌ಗಳನ್ನು PF ವ್ಯವಸ್ಥೆಗೆ ಸೇರಿಸುವ ಬಗ್ಗೆಯೂ EPFO ಚಿಂತನೆ ನಡೆಸುತ್ತಿದೆ. ಉದ್ಯೋಗದಾತರ ನೆರವಿಲ್ಲದೆ ಡಿಜಿಟಲ್ ಮೂಲಕ ತಮ್ಮ PF ಖಾತೆಗೆ ಸ್ವತಃ ಹಣ ಜಮಾ ಮಾಡುವ ಅವಕಾಶ ಕಲ್ಪಿಸುವ ಪ್ರಸ್ತಾವವೂ ಪರಿಶೀಲನೆಯಲ್ಲಿದೆ. ಆದರೆ ಈ ವ್ಯವಸ್ಥೆ ಇನ್ನೂ ಅಂತಿಮವಾಗಿಲ್ಲ.
₹50 ಲಕ್ಷ PF ಇದ್ದರೆ ತಿಂಗಳಿಗೆ ₹41,822 ಪಡೆಯಬಹುದೇ?
ನಿವೃತ್ತಿಯ ಸಮಯದಲ್ಲಿ PF ಖಾತೆಯಲ್ಲಿ ₹50 ಲಕ್ಷ ಇದ್ದರೆ, ಆ ಹಣವನ್ನು ವಿವಿಧ ಹೂಡಿಕೆ ಆಯ್ಕೆಗಳ ಮೂಲಕ ಬಳಸಿಕೊಂಡು ನಿಯಮಿತ ಆದಾಯ ಪಡೆಯುವ ಲೆಕ್ಕಾಚಾರವನ್ನು ಮಾಡಲಾಗಿದೆ.
-
EPF SWP: ವಾರ್ಷಿಕ ಶೇ.8ರ ಆದಾಯದ ಅಂದಾಜಿನಲ್ಲಿ ತಿಂಗಳಿಗೆ ₹41,822; 20 ವರ್ಷಗಳಲ್ಲಿ ಒಟ್ಟು ಸುಮಾರು ₹1 ಕೋಟಿ.
-
ಬ್ಯಾಂಕ್ FD: ತೆರಿಗೆ ಬಳಿಕ ಶೇ.4.82 ಪರಿಣಾಮಕಾರಿ ಬಡ್ಡಿದರದ ಅಂದಾಜಿನಲ್ಲಿ ತಿಂಗಳಿಗೆ ₹32,492; 20 ವರ್ಷಗಳಲ್ಲಿ ಸುಮಾರು ₹78 ಲಕ್ಷ.
-
ಕಮರ್ಷಿಯಲ್ ಆನ್ಯುಟಿ: ಶೇ.6ರ ಆದಾಯದ ಅಂದಾಜಿನಲ್ಲಿ ತಿಂಗಳಿಗೆ ₹30,637; 20 ವರ್ಷಗಳಲ್ಲಿ ಸುಮಾರು ₹73.5 ಲಕ್ಷ.
SWP ಎಂದರೇನು?
SWP (Systematic Withdrawal Plan) ಎಂದರೆ ಮ್ಯೂಚುವಲ್ ಫಂಡ್‌ನಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ, ಅದರಿಂದ ಪ್ರತಿ ತಿಂಗಳು ನಿಗದಿತ ಹಣವನ್ನು ಹಿಂಪಡೆಯುವ ವಿಧಾನ. ಇದರಲ್ಲಿ ಹೂಡಿಕೆಯ ಲಾಭದ ಜೊತೆಗೆ ಮೂಲ ಹಣವೂ ಬಳಕೆಯಾಗಬಹುದು. ಮಾರುಕಟ್ಟೆಯ ಏರಿಳಿತಗಳ ಮೇಲೆ ಆದಾಯ ಅವಲಂಬಿತವಾಗಿರುವುದರಿಂದ ಶೇ.8ರಷ್ಟು ರಿಟರ್ನ್ ಖಚಿತವಲ್ಲ.
ನಿವೃತ್ತರಿಗೆ ಯಾವ ಆಯ್ಕೆ ಸೂಕ್ತ?
SWP ಲೆಕ್ಕಾಚಾರದ ಪ್ರಕಾರ ಬ್ಯಾಂಕ್ FDಗೆ ಹೋಲಿಸಿದರೆ ತಿಂಗಳಿಗೆ ₹9,330 ಹೆಚ್ಚು ಹಾಗೂ ಕಮರ್ಷಿಯಲ್ ಆನ್ಯುಟಿಗೆ ಹೋಲಿಸಿದರೆ ₹11,185 ಹೆಚ್ಚು ಆದಾಯ ಸಿಗಬಹುದು. ಆದರೆ SWP ಮಾರುಕಟ್ಟೆ ಅಪಾಯ ಹೊಂದಿದೆ. FD ಮತ್ತು ಆನ್ಯುಟಿಗಳಲ್ಲಿ ಅವುಗಳದೇ ಆದ ನಿಯಮಗಳು ಹಾಗೂ ಷರತ್ತುಗಳಿವೆ.
ನಿವೃತ್ತಿಯ ನಂತರ ನಿಯಮಿತ ಆದಾಯದ ಅಗತ್ಯವಿರುವವರಿಗೆ ಇಂತಹ ವ್ಯವಸ್ಥೆ ನೆರವಾಗಬಹುದು. ಆದರೆ EPFOನ ಈ ಹೊಸ ಯೋಜನೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದ್ದು, ಅಧಿಕೃತ ಅನುಮೋದನೆ ಹಾಗೂ ಜಾರಿ ಕುರಿತು ಅಂತಿಮ ನಿರ್ಧಾರ ಹೊರಬಂದ ಬಳಿಕವೇ ಸಂಪೂರ್ಣ ವಿವರ ತಿಳಿಯಲಿದೆ.
ಸೂಚನೆ: SWP ಮತ್ತು EPFO ಯೋಜನೆಗೆ ಸಂಬಂಧಿಸಿದ ಅಂಕಿಅಂಶಗಳು ವರದಿಯಲ್ಲಿನ ಅಂದಾಜುಗಳು ಹಾಗೂ ಪ್ರಸ್ತಾವಿತ ಯೋಜನೆಯ ವಿವರಗಳ ಆಧಾರದ ಮೇಲೆ ನೀಡಲಾಗಿದೆ. ಅಧಿಕೃತ ಅನುಮೋದನೆ ಮತ್ತು ಜಾರಿ ಕುರಿತು ಅಂತಿಮ ಮಾಹಿತಿ ಬಂದ ಬಳಿಕವೇ ಯೋಜನೆಯ ನಿಖರ ನಿಯಮಗಳು ತಿಳಿಯಲಿವೆ.