ಬೆಂಗಳೂರು : ಕರ್ನಾಟಕದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ನೋಂದಾಯಿತ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಒತ್ತು ನೀಡಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅರ್ಹ ಕಾರ್ಮಿಕರಿಗೆ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಪಿಂಚಣಿ ಮತ್ತು ಆರ್ಥಿಕ ಭದ್ರತೆ : ಕಾರ್ಮಿಕರ ನಿವೃತ್ತಿಯ ನಂತರ ಮಾಸಿಕ ಪಿಂಚಣಿ, ಅಕಾಲಿಕ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ಹಾಗೂ ಕೆಲಸದ ಸಮಯದಲ್ಲಿ ಅಂಗವೈಕಲ್ಯಕ್ಕೀಡಾದವರಿಗೆ ವಿಶೇಷ ಪಿಂಚಣಿ ಸೌಲಭ್ಯವಿದೆ.
ಆರೋಗ್ಯ ಮತ್ತು ಹೆರಿಗೆ ಸೌಲಭ್ಯ: ಸಾಮಾನ್ಯ ಹಾಗೂ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಸಹಾಯಧನದ ಜೊತೆಗೆ ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ ಮತ್ತು ‘ತಾಯಿ ಮಗು ಸಹಾಯಹಸ್ತ’ ಯೋಜನೆಯಡಿ ವಿಶೇಷ ನೆರವು ನೀಡಲಾಗುವುದು.
ಶಿಕ್ಷಣ ಮತ್ತು ವಿವಾಹಕ್ಕೆ ನೆರವು: ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯಧನ ಹಾಗೂ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಆರ್ಥಿಕ ಧನಸಹಾಯ ನೀಡುವ ಮೂಲಕ ಕುಟುಂಬದ ಹೊರೆ ತಗ್ಗಿಸಲಾಗುತ್ತಿದೆ.
ವೃತ್ತಿಪರ ಮತ್ತು ತುರ್ತು ಪರಿಹಾರ: ಕಾರ್ಮಿಕರಿಗೆ ಅಗತ್ಯವಾದ ಟೂಲ್ ಕಿಟ್ ಒದಗಿಸುವುದು, ಅಪಘಾತದ ಸಂದರ್ಭದಲ್ಲಿ ಪರಿಹಾರ ಹಾಗೂ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ಅನುಗ್ರಹ ರಾಶಿ ಸಹಾಯಧನವನ್ನು ಮಂಡಳಿಯು ನೀಡಲಿದೆ. ಈ ಯೋಜನೆಗಳ ಸಂಪೂರ್ಣ ಲಾಭ ಪಡೆಯಲು ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಯೋಜನೆಗಳ ಸಂಪೂರ್ಣ ಲಾಭ ಪಡೆಯಲು ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೆಚ್ಚಿನ ವಿವರಗಳಿಗಾಗಿ ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಸಂಪರ್ಕಿಸಬಹುದು.
