ಬೆಂಗಳೂರು: ಪತಿ ಹಾಗೂ ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆಯೊಂದಿಗೆ ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗುವ ಘಟನೆ ಬೆಂಗಳೂರಿನ ಶ್ರೀಗಂಧನಗರದಲ್ಲಿ ನಡೆದಿದೆ.
ಮೃತನನ್ನು ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಎಂದು ಗುರುತಿಸಲಾಗಿದೆ. ತಿಪ್ಪೇಸ್ವಾಮಿ, ದಾವಣಗೆರೆ ಮೂಲದ ಮಹಿಳೆಯೊಬ್ಬರಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ. ಮಹಿಳೆ ರೀಲ್ಸ್ ಮಾಡುವುದರಲ್ಲಿ ಸಕ್ರಿಯಳಾಗಿದ್ದು, ಇಬ್ಬರೂ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಮಹಿಳೆ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಬಂದಿದ್ದರು. ಕಳೆದ ಎರಡು ತಿಂಗಳಿನಿಂದ ತಿಪ್ಪೇಸ್ವಾಮಿ ಜೊತೆ ಶ್ರೀಗಂಧನಗರದ ಬಾಡಿಗೆ ಮನೆಯಲ್ಲಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದಳು. ಮನೆ ಮಾಲೀಕರಿಗೆ ತಾವು ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ವಾಸವಿದ್ದರು ಎನ್ನಲಾಗಿದೆ.
ತಿಪ್ಪೇಸ್ವಾಮಿ ಹಾಗೂ ಮಹಿಳೆಗೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ನನ್ನನ್ನು ಮೇಂಟೇನ್ ಮಾಡಲು ನಿನ್ನಿಂದ ಸಾಧ್ಯವಿಲ್ಲ, ನನ್ನನ್ನು ಬಿಟ್ಟು ಹೋಗು ಎಂದು ಮಹಿಳೆ ತಿಪ್ಪೇಸ್ವಾಮಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳಂತೆ. ಇದೇ ಕಾರಣಕ್ಕೆ ಮನನೊಂದ ತಿಪ್ಪೇಸ್ವಾಮಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ಕುಟುಂಬಸ್ಥರು ಮಹಿಳೆಯ ಕಿರುಕುಳವೇ ತಿಪ್ಪೇಸ್ವಾಮಿ ಸಾವಿಗೆ ಕಾರಣ ಎಂದು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಮಹಿಳೆ ನಾಪತ್ತೆಯಾಗಿದ್ದು, ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.