ಆಸ್ಟ್ರೇಲಿಯಾದ ಮ್ಯಾರಥಾನ್ ಓಟದಲ್ಲಿ ಕರ್ನಾಟಕದ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಮತ್ತು ವೃಕ್ಷಥಾನ್ ನ ಸದಾನಂದ ಅಮ್ರಾಪುರ ಭಾಗಿಯಾಗಿ ಗಮನಸೆಳೆದಿದ್ದಾರೆ. ಅವರಿಗೆ ಸಚಿವ ಎಂ.ಬಿ. ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಆಸ್ಟ್ರೇಲಿಯಾದ ಮ್ಯಾರಥಾನ್ ಓಟದಲ್ಲಿ ಗಮನ ಸೆಳೆದ ವೃಕ್ಷಥಾನ್ ನ ಬ್ರಾಂಡ್ ಅಂಬಾಸೆಡರ್ಸ್!
ನಾಡಿನ ಹೆಸರಾಂತ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ಆಸ್ಟ್ರೇಲಿಯಾದ ಪಶ್ಚಿಮ ಸಿಡ್ನಿಯಲ್ಲಿ ಇದೇ ಮೇ 17ರಂದು ನಡೆದ ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ತಮ್ಮ ಆರನೇ ಐರನ್ ಮ್ಯಾನ್ ಸಾಧನೆಯನ್ನು ದಾಖಲಿಸಿ, ಅದರೊಂದಿಗೆ ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಬೆಳಗಿಸಿದ್ದಾರೆ.
ಅದೇ ರೀತಿ ಸದಾನಂದ ಅಮ್ರಾಪುರ ಅವರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ, 4 ಗಂಟೆ 50 ನಿಮಿಷಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಇಬ್ಬರು ಹೆಮ್ಮೆಯ ಕನ್ನಡಿಗರಿಗೆ ಹಾಗೂ ಅವರ ಅಪೂರ್ವ ಸಾಧನೆಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸದಾನಂದ ಅಮ್ರಾಪುರ ಅವರು ಕಳೆದ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ಸೈಕಲ್ ಮೂಲಕವೇ ವಿಜಯಪುರಕ್ಕೆ ಬಂದು, ಗಮನ ಸೆಳೆದಿದ್ದರು. ಈಗ ಆಸ್ಟ್ರೇಲಿಯಾದಲ್ಲಿ ಈ ಓಟದಲ್ಲಿ ಕೂಡ ವೃಕ್ಷಥಾನ್ ಹೆರಿಟೇಜ್ ರನ್ ಟಿ ಶರ್ಟ್ ಧರಿಸಿ ಓಡಿರುವುದು ವಿಜಯಪುರದ ಹೆಸರಿನ ಕುರಿತಾದ ಅವರ ಅಭಿಮಾನವನ್ನು ವ್ಯಕ್ತಪಡಿಸುತ್ತದೆ.
ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯಾವ ರೀತಿ ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂಬುದರ ಕುರಿತು ಮಾದರಿಯಾಗಿದ್ದಾರೆ. ಈ ಹಿಂದೆ ಕೊಪನ್ ಹೇಗನ್ ನಲ್ಲಿ ನಡೆದ ಐರನ್ ಮೆನ್ ನಲ್ಲಿ ಕೂಡ ಭಾಗವಹಿಸಿ, ವಿಜೇತರಾಗಿದ್ದರು. ಈಗ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ.
ಮುಂದಿನ ದಿನಗಳಲ್ಲಿ ಇವರುಗಳು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ, ನಮ್ಮ ಬಸವನಾಡು ಹಾಗೂ ಕರ್ನಾಟಕದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಸಚಿವ ಎಂ.ಬಿ. ಪಾಟೀಲ್ ಹಾರೈಸಿದ್ದಾರೆ.