ಚಿಕ್ಕಮಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕನನ್ನು ನರಸಿಂಹರಾಜಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎನ್ಆರ್ ಪುರ ತಾಲೂಕಿನ ಕಣಿವೆ ಗ್ರಾಮದಲ್ಲಿ ದೇವಾಲಯ ಸಮೀಪದ ಪೊದೆಯಲ್ಲಿ ಮಂಗಳವಾರ ಬೆಳಗ್ಗೆ ನವಜಾತ ಹೆಣ್ಣು ಶಿಶು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ 20 ವರ್ಷದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ 25 ವರ್ಷದ ಯುವಕ ಹಾಗೂ ತಾನು ಪರಸ್ಪರ ಪ್ರೀತಿಸಿದ್ದು ಆತ ಮದುವೆಯಾಗುವುದಾಗಿ ನಂಬಿಸಿದ್ದ. ಕುಟುಂಬದವರು ಒಪ್ಪಿಕೊಂಡು ಮಾತುಕತೆ ಕೂಡ ನಡೆಸಲಾಗಿತ್ತು. ಮದುವೆಯಾಗುವುದಾಗಿ ಹೇಳಿದ್ದ ಯುವಕ, ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಕಳೆದ ಸೋಮವಾರ ರಾತ್ರಿ ಯುವತಿಗೆ ಹೆರಿಗೆಯಾಗಿದೆ. ಈ ವಿಷಯವನ್ನು ಯುವಕನಿಗೆ ಹೇಳಿದರೂ ಸರಿಯಾಗಿ ಉತ್ತರ ನೀಡಿರಲಿಲ್ಲ ಎಂದು ಪೊಲೀಸರಿಗೆ ಯುವತಿ ಮಾಹಿತಿ ನೀಡಿದ್ದಾಳೆ.
ಪೊದೆಯಲ್ಲಿ ಮಗು ಅಳುವ ಶಬ್ದ ಕೇಳಿದ ಸ್ಥಳೀಯ ನೀರುಗಂಟಿ ಸಮೀಪ ಹೋಗಿ ನೋಡಿ ಮಗುವನ್ನು ಗಮನಿಸಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಗುವನ್ನು ಸುರಕ್ಷಿತವಾಗಿ ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸಿಡಿಪಿಒ ನೀಡಿದ ದೂರು ಆದರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಯುವತಿಗೆ ಮದುವೆಯಾಗುವುದಾಗಿ ವಂಚಿಸಿರುವುದು ಬೆಳಕಿಗೆ ಬಂದಿದ್ದು, ತೀರ್ಥಹಳ್ಳಿ ತಾಲೂಕಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.