ರಾಯಚೂರು ಜಿಲ್ಲೆ ಲಿಂಗಸುಗೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ(ಆರ್.ಡಿ.ಪಿ.ಆರ್.) ಕಚೇರಿಯಲ್ಲಿ ಗುಂಡು ತುಂಡಿನ ಪಾರ್ಟಿ ಮಾಡಿದ್ದ ಆರೋಪದ ಮೇಲೆ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಇಇ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಕಚೇರಿಯ ಪಾರ್ಟಿ ಮಾಡಿದ್ದ ಎಇಇ ಹನುಮಪ್ಪ ಆದವಾನಿ, ಪ್ರಥಮ ದರ್ಜೆ ಸಹಾಯಕ ರಾಮಣ್ಣ ಪೂಜಾರಿ, ಕಾವಲುಗಾರ ಹನುಮಂತ ಅವರು ಅಮಾನತುಗೊಂಡವರು. ಗುಂಡು ತುಂಡು ಸಹಿತ ಇವರು ಪಾರ್ಟಿ ಮಾಡಿದ್ದರು.
ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ದುರ್ಬಳಕೆ ಮಾಡಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಆರ್.ಡಿ.ಪಿ.ಆರ್. ಇಲಾಖೆ ಅಧೀನ ಕಾರ್ಯದರ್ಶಿ ಎಂ.ಚೇತನ್ ಅವರು ಈ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಆರ್.ಡಿ.ಪಿ.ಆರ್. ಕಚೇರಿಯಲ್ಲಿ ನಿವೃತ್ತ ನೌಕರರು, ಹೊರಗಿನ ವ್ಯಕ್ತಿಗಳೊಂದಿಗೆ ಅಧಿಕಾರಿಗಳು, ನೌಕರರು ಗುಂಡು ತುಂಡು ಸಹಿತ ಪಾರ್ಟಿ ಮಾಡಿದ್ದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ಇಲಾಖಾ ವಿಚಾರಣೆ ಬಾಕಿ ಇರಿಸಿ ಈ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.