ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನಡುವೆ ಹೊಸ ರಾಜಕೀಯ ಸಂಚಲನ ಶುರುವಾಗಿದೆ. “ಅಧಿಕಾರ ಮತ್ತು ಪೀಠ ಬೇಕಾದವರು ಸಿಎಂ ಡಿ.ಕೆ. ಶಿವಕುಮಾರ್ ಹಿಂದೆ ಹೋಗಲಿ, ಪಕ್ಷ ಸಂಘಟನೆ ಮಾಡುವವರು ನನ್ನ ಜೊತೆ ಬರಲಿ” ಎಂದು ಬಿ.ಕೆ. ಹರಿಪ್ರಸಾದ್ ನೀಡಿರುವ ಸ್ಫೋಟಕ ಹೇಳಿಕೆ ಈಗ ಸಖತ್ ಚರ್ಚೆಗೆ ಗ್ರಾಸವಾಗಿದೆ.ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಮಹತ್ವದ ಮಾತುಗಳನ್ನು ಆಡಿದ್ದಾರೆ.
ಬಿ.ಕೆ. ಹರಿಪ್ರಸಾದ್ ಹೇಳಿದ್ದೇನು?
ಅಧಿಕಾರ Vs ಸಂಘಟನೆ:
“ಯಾರಿಗೆ ಅಧಿಕಾರ ಮತ್ತು ಸ್ಥಾನಮಾನಗಳು ಬೇಕೋ ಅವರು ಡಿ.ಕೆ. ಶಿವಕುಮಾರ್ ಅವರ ಹಿಂದೆ ಹೋಗಲಿ. ಯಾರಿಗೆ ಪಕ್ಷವನ್ನು ಸಂಘಟಿಸಿ, ಬಲಪಡಿಸಬೇಕೋ ಅವರು ನನ್ನೊಂದಿಗೆ ಬರಲಿ. ನಾವಿಬ್ಬರೂ ಜವಾಬ್ದಾರಿಗಳನ್ನು ಹಂಚಿಕೊಂಡು ಒಟ್ಟಿಗೆ ಮುನ್ನಡೆಯೋಣ. ನಾನು ಪಕ್ಷದ ಕಾರ್ಯಕರ್ತರಿಗೆ ಈ ಭರವಸೆ ನೀಡುತ್ತೇನೆ ಮತ್ತು ಅವರ ಬೆನ್ನಿಗೆ ನಿಲ್ಲುತ್ತೇನೆ” ಎಂದು ಹರಿಪ್ರಸಾದ್ ಬಹಿರಂಗವಾಗಿ ಹೇಳಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದ ಸಿಪಾಯಿ: “ನಾನು ವಿದ್ಯಾರ್ಥಿ ದೆಸೆಯಿಂದಲೇ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ವರಿಷ್ಠರ ಬಳಿ ಹೋಗಿ ಯಾವತ್ತೂ ಸಚಿವ ಸ್ಥಾನ ಬೇಕು ಅಂತ ಕೇಳಿಲ್ಲ. ನಾನು ಅಧಿಕಾರಕ್ಕಾಗಿ ಪಕ್ಷದಲ್ಲಿ ಇಲ್ಲ, ನಾನು ಕಾಂಗ್ರೆಸ್‌ನ ಸಿಪಾಯಿ. ನಮ್ಮ ಹಿರಿಯರ ಆದರ್ಶ ಪಾಲಿಸಿಕೊಂಡು ಜವಾಬ್ದಾರಿ ನಿರ್ವಹಿಸುತ್ತೇನೆ” ಎಂದಿದ್ದಾರೆ.
ಕಾರ್ಯಕರ್ತರಿಗೆ ಅಭಯ: ಪಕ್ಷದ ಸಾಂಸ್ಥಿಕ ಬದಲಾವಣೆಗಳ ಬಗ್ಗೆ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಸಂಘಟನೆ ಬಲಪಡಿಸಲು ಬಯಸುವವರು ನಮ್ಮೊಂದಿಗೆ ಕೈಜೋಡಿಸಬಹುದು. ಸರ್ಕಾರದ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು ಪಕ್ಷದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಹೈಕಮಾಂಡ್ ಹಾದಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ಅವರ ಕೈ ಬಲಪಡಿಸಲು ನಾವು ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದರು.
ತಮ್ಮ ಹೇಳಿಕೆಗಳ ನಡುವೆಯೇ ಭವಿಷ್ಯದ ರಾಜಕೀಯದ ಬಗ್ಗೆ ಮಾತನಾಡಿದ ಹರಿಪ್ರಸಾದ್, ಕೆಲವು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ,ಜಾತಿ ಮುಖ್ಯವಲ್ಲ “ನಾನು ಹಿಂದುಳಿದ ಅಥವಾ ಮುಂದುವರಿದ ವರ್ಗಕ್ಕೆ ಸೇರಿದವನು ಎನ್ನುವುದು ಮುಖ್ಯವಲ್ಲ. ನಾನು ಮುಂದುವರೆದವರಿಗಿಂತ ಮುಂದುವರೆದವನು” ಎಂದು ನುಡಿದರು.
ಅಪಪ್ರಚಾರಕ್ಕೆ ಟಾಂಗ್: 2028ಕ್ಕೆ ನಾನು ಮುಖ್ಯಮಂತ್ರಿ ಅಭ್ಯರ್ಥಿ ಅನ್ನೋದು ಕೇವಲ ವಾಟ್ಸಪ್ ಯುನಿವರ್ಸಿಟಿಯ ಅಪಪ್ರಚಾರ. ನನಗೆ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಎಸ್‌ಐಆರ್, ಸಿಎಎ ವಿರುದ್ಧ ಹೋರಾಡುವ ಜವಾಬ್ದಾರಿ ಇದೆ. ಅಧಿಕಾರ ನನಗೆ ಮುಖ್ಯವಲ್ಲ, ನಾವು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಗುಡುಗಿದ್ದಾರೆ.
ಕರ್ನಾಟಕ ಮಾಡೆಲ್ ಹೆಮ್ಮೆ: “ನಮಗೆ ಗುಜರಾತ್ ಮಾಡೆಲ್ ಬೇಕಿಲ್ಲ, ಬದಲಾಗಿ ಕರ್ನಾಟಕ ಮಾಡೆಲ್ ಬಗ್ಗೆ ಹೆಮ್ಮೆ ಇದೆ. ಸರ್ಕಾರ ಮತ್ತು ಪಕ್ಷದಲ್ಲಿ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ” ಎನ್ನುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಇದರಲ್ಲಿ ಯಾವುದೇ ಬಣ ಅಥವಾ ಗುಪ್ತ ಅರ್ಥ ಇಲ್ಲ
ತಮ್ಮ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಬಿ.ಕೆ. ಹರಿಪ್ರಸಾದ್, ನನ್ನ ಹೇಳಿಕೆಯಲ್ಲಿ ಯಾವುದೇ ಒಳಾರ್ಥ ಅಥವಾ ಗುಪ್ತ ಸಂದೇಶವಿಲ್ಲ. ಇದರಲ್ಲಿ ಯಾವುದೇ ಬಣಗಳಿಲ್ಲ. ಸಾಂಸ್ಥಿಕ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದೇನೆ. ಅಧಿಕಾರ ಬೇಕಾದವರು ಡಿಕೆಶಿ ಬಳಿ ಹೋಗಲಿ, ಸಂಘಟನೆ ಮಾಡುವವರು ನನ್ನ ಬಳಿ ಬರಲಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಸಚಿವಾಕಾಂಕ್ಷಿಗಳಿಗೆ ಟಾಂಗ್?
ಡಿಕೆಶಿ ಸಂಪುಟ ಸೇರಲು ಭರ್ಜರಿ ಲಾಬಿ ನಡೆಸುತ್ತಿರುವ ಮಾಜಿ ಸಚಿವರನ್ನು ಗುರಿಯಾಗಿಸಿಕೊಂಡೇ ಹರಿಪ್ರಸಾದ್ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ನೂತನ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಅವರ ಸದಾಶಿವನಗರದ ನಿವಾಸಕ್ಕೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಭೇಟಿ ನೀಡಿ, ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.