ಬೆಂಗಳೂರು: ಕೊನೆ ಕ್ಷಣದಲ್ಲಿ ಜೆಡಿಎಸ್ ವಿಧಾನಪರಿಷತ್ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ 7 ಸ್ಥಾನಗಳಿಗೆ ಜೂ.18ರಂದು ನಡೆಯಲಿರುವ ಚುನಾವಣೆ ಮೂರು ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.
ನಾಮಪತ್ರ ಸಲ್ಲಿಸಲು ಸೋಮವಾರವಾದ ಕಡೆಯ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಕಾಂಗ್ರೆಸ್‌ನಿಂದ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಗೋವಿಂದರಾಜು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ತಿಪ್ಪಣ್ಣಪ್ಪ ಕನಕನೂರು, ಪಿ.ವಿ.ಮೋಹನ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಶಿವಣ್ಣ.ಬಿ.ಎಸ್ ಹಾಗೂ ವಿನಯ್ ಕಾರ್ತಿಕ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜ್ ಅವರು ಚುನಾವಣಾ ಸ್ಪರ್ಧೆಗಿಳಿದಿದ್ದಾರೆ.
ಕಣದಲ್ಲಿ ಮೂರು ಪಕ್ಷಗಳಿಂದ 8 ಅಭ್ಯರ್ಥಿಗಳು ಇರುವ ಕಾರಣ ಮತದಾನ ನಡೆಯುವುದು ಬಹುತೇಕ ಖಚಿತವಾಗಿದ್ದು, ಪಕ್ಷೇತರರು ಹಾಗೂ ಭಿನ್ನಮತೀಯ ಶಾಸಕರಿಗೆ ಎಲ್ಲಿಲ್ಲದ ಬೇಡಿಕೆ ಬರಲಿದೆ.
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್(ಬಿಜಾಪುರ), ಎಸ್.ಟಿ.ಸೋಮಶೇಖರ್(ಯಶವಂತಪುರ) ಹಾಗೂ ಶಿವರಾಮ್ ಹೆಬ್ಬಾರ್(ಯಲ್ಲಾಪುರ), ಪಕ್ಷೇತರ ನಾಲ್ವರು ಶಾಸಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಆರಂಭವಾಗಿದೆ.
ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ: ಮತ್ತೊಮ್ಮೆ ಪ್ರತಿಷ್ಠೆಯ ಸಮರ
ಪುನಃ ಇಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆಯೇ ಮತ್ತೊಮೆ ಜಟ್ಟಿ ಕಾಳಗಕ್ಕೆ ವೇದಿಕೆ ಸಿದ್ಧವಾಗಿದೆ. ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಮತ್ತು ಎನ್‌ಡಿಎ ಅಭ್ಯರ್ಥಿ ಗೋವಿಂದರಾಜು ಗೆಲ್ಲಿಸಿಕೊಳ್ಳುವ ಹೊಣೆಗಾರಿಕೆ ಇಬ್ಬರ ಮೇಲಿದೆ.
ಹಾಗೆ ನೋಡಿದರೆ ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಕಮಲ ಪಕ್ಷ ನಿರಾಳವಾಗಿದೆ.
ಅಡ್ಡಮತದಾನದ ಆತಂಕ ಹೆಚ್ಚಿಸಿದ ಚುನಾವಣಾ ಕಾವು
ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದಂತೆಯೇ, ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳಲ್ಲಿ ಅಡ್ಡಮತದಾನದ ಭಯ ಕಾಡಲಾರಂಭಿಸಿದೆ.
ಸಂಖ್ಯಾಬಲದ ಲೆಕ್ಕಾಚಾರ
ಪಕ್ಷಗಳ ಶಾಸಕರ ಸಂಖ್ಯೆಗಿಂತ ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿರುವುದರಿಂದ, ಗೆಲುವಿಗಾಗಿ ನಿಗದಿತ ಮತಗಳ ಕ್ರೋಢೀಕರಣ ಸವಾಲಾಗಿದೆ.
ಅತೃಪ್ತರು ಮತ್ತು ಅವಕಾಶವಾದಿಗಳು
ಪಕ್ಷದ ವರಿಷ್ಠರ ನಿರ್ಧಾರಗಳಿಗೆ ಅಸಮಾಧಾನಗೊಂಡಿರುವ ಶಾಸಕರು ಅಥವಾ ತಮ ಭವಿಷ್ಯದ ರಾಜಕೀಯ ಲಾಭಕ್ಕಾಗಿ ಇತರ ಪಕ್ಷಗಳತ್ತ ಒಲವು ತೋರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಪಕ್ಷದ ಶಿಸ್ತು
ಪ್ರತಿ ಪಕ್ಷವೂ ತಮ ಶಾಸಕರ ಮೇಲೆ ನಿಗಾ ಇರಿಸಲು ಹರಸಾಹಸ ಪಡುತ್ತಿದ್ದು, ‘ವಿಪ್’ ಜಾರಿಗೊಳಿಸುವ ಕುರಿತಾದ ಚರ್ಚೆಗಳು ಬಿರುಸುಗೊಂಡಿವೆ.
ಪಕ್ಷೇತರ ಶಾಸಕರಿಗೆ ಹೆಚ್ಚಿದ ಬೇಡಿಕೆ
ಈ ಚುನಾವಣೆಯಲ್ಲಿ ಪಕ್ಷೇತರ ಶಾಸಕರ ಪಾತ್ರ ನಿರ್ಣಾಯಕವಾಗಿದೆ. ಅಭ್ಯರ್ಥಿಗಳ ಗೆಲುವಿಗೆ ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಪಕ್ಷಗಳು ಇವರ ಮೊರೆ ಹೋಗುತ್ತಿದ್ದು, ಅಕ್ಷರಶಃ ಇವರಿಗೆ ಈಗ ‘ಕಿಂಗ್ ಮೇಕರ್’ ಪಟ್ಟ ದೊರೆತಂತಾಗಿದೆ.
ಮತಗಳ ಅಂತರವನ್ನು ಭರ್ತಿ ಮಾಡಲು ಪಕ್ಷೇತರರ ಬೆಂಬಲ ಅನಿವಾರ್ಯ. ಹೀಗಾಗಿ ಅವರಿಗೆ ಭಾರೀ ಬೇಡಿಕೆ ಉಂಟಾಗಿದ್ದು, ರಾಜಕೀಯ ಲಾಬಿ ತೀವ್ರಗೊಂಡಿದೆ.
ಒಂದು ವೇಳೆ ರಾಜ್ಯಸಭೆ ಚುನಾವಣೆಯಂತೆ ಕಾಂಗ್ರೆಸ್ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಮೂರು ಪಕ್ಷಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು.
ಮತದಾನ ಅನಿವಾರ್ಯವಾಗಿರುವುದರಿಂದ ಮೂರೂ ಪಕ್ಷಗಳಲ್ಲಿ ತಮ ತಮ ಅಭ್ಯರ್ಥಿಗಳ ಗೆಲುವಿಗೆ ಚುನಾವಣಾ ತಂತ್ರಗಾರಿಕೆಗಳು ರೂಪಿಸಲಾಗುತ್ತದೆ. ಜೊತೆಗೆ ತಮ ಶಾಸಕರ ಮತಗಳು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ದೊರೆಯಂತೆ ಮಾಡಲು ವಿಪ್ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಕಾಂಗ್ರೆಸ್‌ಗೆ 4, ಬಿಜೆಪಿಗೆ 2 ಸ್ಥಾನಗಳು ಸುಲಭ?
ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ 4 ಸ್ಥಾನ ಹಾಗೂ ಬಿಜೆಪಿ ಹೊಂದಿರುವ ಶಾಸಕರ ಸಂಖ್ಯಾ ಬಲದ ಆಧಾರದ ಮೇಲೆ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ.
ಆದರೆ ಜೆಡಿಎಸ್ 18 ಶಾಸಕರನ್ನು ಹೊಂದಿರುವುದರಿಂದ ಸುಲಭವಾಗಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಬಿಜೆಪಿಯ ಹೆಚ್ಚುವರಿ ಮತಗಳನ್ನು ಪಡೆದರೂ ಗೆಲುವಿನ ದಡ ಸೇರುವುದು ಕಷ್ಟವಾಗಲಿದೆ.
ಆದರೆ ಕಾಂಗ್ರೆಸ್ ಕೂಡ 5ನೇ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದೆ. ಈ ಅಭ್ಯರ್ಥಿಯ ಗೆಲುವು ಸುಲಭವಲ್ಲ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಗಳು ಗೋಚರಿಸುತ್ತಿವೆ.
ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ.11ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು ಅಂದು ಅಂತಿಮ ಕಣದಲ್ಲಿ ಉಳಿಯುವ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ.
ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆಯದಿದ್ದರೆ ಜೂ.18ರಂದು ಮತದಾನ ನಡೆದು ಅಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ನಿವೃತ್ತಿಯಾಗಲಿರುವ ವಿಧಾನ ಪರಿಷತ್ ಸದಸ್ಯರು
ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ನಸೀರ್ ಅಹದ್, ಎಂ.ಟಿ.ಬಿ.ನಾಗರಾಜು, ಪ್ರತಾಪಸಿಂಹ ನಾಯಕ್ ಕೆ., ತಿಪ್ಪಣ್ಣಪ್ಪ, ಸುನೀಲ್ ವಲ್ಯಾಪುರ್, ಬಿ.ಕೆ.ಹರಿಪ್ರಸಾದ್ ಅವರು ಜೂ.30ರಂದು ನಿವೃತ್ತಿಯಾಗಲಿದ್ದಾರೆ.
ಇವರ ನಿವೃತ್ತಿಯಿಂದ ತೆರವಾಗುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಗಳ ಆಯ್ಕೆಗೆ ಭಾರತದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ರಾಜ್ಯಸಭೆಗೆ ಅವಿರೋಧ ಆಯ್ಕೆ?
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಹಾಗೂ ಮನ್ಸೂರ್ ಅಲಿ ಖಾನ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೊ.ಎಂ.ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಗೆಲ್ಲಲು ಸಾಧ್ಯವಾಗುವಷ್ಟು ಶಾಸಕರ ಸಂಖ್ಯಾಬಲ ಇಲ್ಲದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಇರುವುದರಿಂದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನೆ ಬೆಂಬಲಿಸಲಿದೆ.
ರಾಜ್ಯಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕೊಡಗಿನ ಬೋಜಣ್ಣ ಸೋಮಯ್ಯ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಇವರ ನಾಮಪತ್ರಕ್ಕೆ ಸೂಚಕರ ಸಹಿ ಇಲ್ಲದಿರುವ ಹಿನ್ನೆಲೆಯಲ್ಲಿ ಬಹುತೇಕ ತಿರಸ್ಕೃತವಾಗಲಿದೆ.
ಹೀಗಾಗಿ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿಯುವ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಚುನಾಯಿತರಾಗಲಿದ್ದಾರೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆದು ಸಿಂಧುವಾದ ನಾಮಪತ್ರಗಳನ್ನು ನಾಳೆ ಸಂಜೆ ಪ್ರಕಟಿಸಲಾಗುತ್ತದೆ. ಉಮೇದುವಾರಿಕೆ ವಾಪಸ್ ಪಡೆಯಲು ಜೂ.11ರವರೆಗೆ ಅವಕಾಶವಿದೆ.
ಅಂದು ಮಧ್ಯಾಹ್ನ 3 ಗಂಟೆಯ ನಂತರ ಅಂತಿಮವಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನ ಮೂವರು, ಬಿಜೆಪಿಯ ಒಬ್ಬ ಉಳಿಯುವುದರಿಂದ ಚುನಾವಣಾಧಿಕಾರಿ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಪ್ರಕಟಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ಬಿಜೆಪಿ ಅಭ್ಯರ್ಥಿ ಎಂ.ನಾಗರಾಜ ಅವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ಈರಣ್ಣ ಕಡಾಡಿ, ನಾರಾಯಣ ಕೊರಗಪ್ಪ ಅವರು ರಾಜ್ಯಸಭೆ ಸದಸ್ಯ ಸ್ಥಾನದಿಂದ ಜೂ.25ರಂದು ನಿವೃತ್ತಿಯಾಗಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ.