ಲಕ್ನೋ: ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಬೇಕಿದ್ದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಟೇಕ್ ಆಫ್ ಆಗಲು ಕೆಲವೇ ನಿಮಿಷಗಳು ಇರುವಾಗ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿದೆ.
ಇಂಡಿಗೋ ವಿಮಾನವು ರನ್‌ವೇ ಕಡೆಗೆ ಚಲಿಸಲು ಸಜ್ಜಾಗುತ್ತಿದ್ದಾಗ, ವಿಮಾನ ನಿಲ್ದಾಣದ ಏರ್‌ಲೈನ್ಸ್ ಕಂಟ್ರೋಲ್ ರೂಮ್‌ಗೆ ಈ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಬೆದರಿಕೆ ಸಂದೇಶ ಬಂದಿದೆ. ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಪೈಲಟ್ ಮತ್ತು ಎಟಿಎಸ್ ಅಧಿಕಾರಿಗಳು ವಿಮಾನ ಹಾರಾಟವನ್ನು ತುರ್ತಾಗಿ ಸ್ಥಗಿತಗೊಳಿಸಿದರು.
ಬಾಂಬ್ ಬೆದರಿಕೆಯ ಚೀಟಿ ಪತ್ತೆಯಾದ ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳಿಗೆ ತುರ್ತು ಮಾಹಿತಿ ನೀಡಲಾಯಿತು. ಭದ್ರತಾ ಸಿಬ್ಬಂದಿಯು ನಿಗದಿಪಡಿಸಿದ ಸುರಕ್ಷತಾ ನಿಯಮಾವಳಿಗಳ ಪ್ರಕಾರ ವಿಮಾನದಾದ್ಯಂತ ಸಮಗ್ರ ತಪಾಸಣೆ ನಡೆಸಿದರು.
ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ವಿಮಾನವನ್ನು ತಕ್ಷಣವೇ ರನ್‌ವೇಯಿಂದ ದೂರವಿರುವ ಸುರಕ್ಷಿತ ‘ಐಸೊಲೇಶನ್ ಬೇ’ಗೆ ಕೊಂಡೊಯ್ಯಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ತುರ್ತು ನಿರ್ಗಮನ ದ್ವಾರಗಳ ಮೂಲಕ ಅತ್ಯಂತ ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳವು ತರಬೇತಿ ಪಡೆದ ಶ್ವಾನದಳದೊಂದಿಗೆ ವಿಮಾನದ ಒಳಭಾಗ, ಇಂಜಿನ್ ಹಾಗೂ ಪ್ರಯಾಣಿಕರ ಎಲ್ಲಾ ಲಗೇಜ್‌ಗಳನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇಡೀ ವಿಮಾನವನ್ನು ಸಂಪೂರ್ಣ ಮರು-ಪರಿಶೀಲನೆಗೆ ಒಳಪಡಿಸಲಾಯಿತು. ಯಾವುದೇ ಸ್ಫೋಟಕವಾಗಲಿ, ಅನುಮಾನಾಸ್ಪದ ವಸ್ತುಗಳಾಗಲಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.