ಧರ್ಮಸ್ಥಳದಲ್ಲಿ ಹಲವಾರು ಕೊಲೆಗಳು ನಡೆದಿದ್ದು, ಮಹಿಳೆಯರ ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ, ನಾನೇ ಹೂತು ಹಾಕಿದ್ದೇನೆ ಎಂದು ಮುಂದೆ ಬಂದು ದೂರು ದಾಖಲಿಸಿದ್ದ ಧರ್ಮಸ್ಥಳದ ಮಾಜಿ ಸ್ವಚ್ಛ ಕಾರ್ಮಿಕ ಚಿನ್ನಯ್ಯ ಬಳಿಕ ಇದೆಲ್ಲ ಷಡ್ಯಂತ್ರ ಎಂದು ಉಲ್ಟಾ ಹೊಡೆದಿದ್ದ.
ಅಲ್ಲದೇ ಈತ ಗುರುತು ಮಾಡಿದ್ದ 17 ಜಾಗಗಳಲ್ಲಿ ಯಾವುದೇ ಅಸ್ಥಿಪಂಜರ ಸಿಗದಿದ್ದಾಗ ಈತ ಹೇಳುತ್ತಿರುವುದು ಸತ್ಯ ಎಂದೇ ನಂಬಲಾಗಿತ್ತು. ಆದರೆ ಬಳಿಕ ಚಿನ್ನಯ್ಯನ ಜತೆ ಈ ಹಿಂದೆ ಮಾತನಾಡಿದ್ದ ವಿಠ್ಠಲ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಬಂಗ್ಲೆಗುಡ್ಡ ಪ್ರವೇಶಿಸಿದ ಎಸ್‌ಐಟಿಗೆ ಭಾರೀ ಶಾಕ್ ಕಾದಿತ್ತು. ಆ ಒಂದು ಜಾಗದಲ್ಲಿ ಮೂಳೆಗಳ ರಾಶಿಯೇ ಸಿಕ್ಕಿತ್ತು. ಒಟ್ಟು ಎಂಟು ಅಸ್ಥಿಪಂಜರಗಳನ್ನು ಎಸ್‌ಐಟಿ ವಶಪಡಿಸಿಕೊಂಡಿತ್ತು.
ಹೀಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡಿದ್ದ ಧರ್ಮಸ್ಥಳದ ಕುರಿತು ನಿನ್ನೆ ( ಜೂನ್ 11 ) ದೊಡ್ಡ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತು. ಚಿನ್ನಯ್ಯ ರಿಟ್ ಅರ್ಜಿ ಸಲ್ಲಿಸಿದ್ದು, ತನಗೆ ಮೂಳೆ ಕೊಟ್ಟಿದ್ದು, ಗಿರೀಶ್ ಮಟ್ಟಣ್ಣವರ್ ಹಾಗೂ ಇದರ ರೂವಾರಿ ನಟ ಪ್ರಕಾಶ್ ರಾಜ್ ಎಂದೆಲ್ಲ ಹೇಳಿಕೆ ನೀಡಿದ್ದಾನೆ ಎಂದು ಬ್ರೇಕಿಂಗ್ ನ್ಯೂಸ್ ಹೊರಟವು.
ಹೀಗೆ ಬುರುಡೆ ಗ್ಯಾಂಗ್ ಷಡ್ಯಂತ್ರ ಹೆಸರಿನಡಿಯಲ್ಲಿ ಬ್ರೇಕಿಂಗ್ ನ್ಯೂಸ್ ಹರಿದಾಡುತ್ತಿರುವಾಗಲೇ ಬೆಂಗಳೂರು ಪೋಸ್ಟ್ ಡಾಟ್ ಕಾಮ್ ವೆಬ್‌ಸೈಟ್ ತಲೆ ಕೆಡಿಸುವ ಬಿಸಿ ಬಿಸಿ ಸುದ್ದಿಯೊಂದನ್ನು ಪ್ರಕಟಿಸಿದ್ದು, ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳ ಪೈಕಿ ಒಂದು ಅಸ್ಥಿಪಂಜರ ಮಹಿಳೆಯದ್ದು ಎಂಬುದನ್ನು ಫಾರೆನ್ಸಿಕ್ ತಂಡ ಖಚಿತಪಡಿಸಿದೆ ಎಂದು ಗೃಹ ಇಲಾಖೆಯ ಮೂಲವೊಂದು ತಮ್ಮ ವೆಬ್‌ಸೈಟ್‌ಗೆ ತಿಳಿಸಿದೆ ಎಂದು ವರದಿ ಮಾಡಿದೆ. ಹೀಗಾಗಿ ಬಂಗ್ಲೆಗುಡ್ಡದಲ್ಲಿ ಸಿಕ್ಕ ಮೂಳೆಗಳ ಪೈಕಿ ಯಾವುದೂ ಸಹ ಮಹಿಳೆಯದ್ದಲ್ಲ ಎಂಬ ವಾದಕ್ಕೆ ಮಹಾ ತಿರುವು ಸಿಕ್ಕಂತಾಗಿದೆ.
ಈ ಮೂಲಕ ಬುರುಡೆ ಗ್ಯಾಂಗ್ ಸುದ್ದಿಯ ಬಿಸಿ ತಣ್ಣಗಾಗುವಂತೆ ಈ ವಿಷಯ ಮಾಡಿದ್ದು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗೂ, ಬಲ್ಲ ಮೂಲಗಳು ಹೇಳಿವೆ ಎಂದು ಈ ವೆಬ್‌ಸೈಟ್ ಪ್ರಕಟಿಸಿರುವ ಸುದ್ದಿಗೂ ಬಹಳ ವ್ಯತ್ಯಾಸವಿದೆ, ಎಸ್‌ಐಟಿಯ ವರದಿ ಬರುವವರೆಗೂ ಯಾವುದನ್ನೂ ನಂಬುವ ಹಾಗಿಲ್ಲ ಎಂಬುದು ಸ್ಪಷ್ಟವಾಗಿದೆ.