ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದ್ವೇಷ ಭಾಷಣ ಆರೋಪ ಮಾಡಿ ಬಿಜೆಪಿ ನಾಯಕ ಛಲವಾದಿ ನಾಅರಾಯಣಸ್ವಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಇದೇ ವಿಚಾರವಾಗಿ ಸ್ವತಃ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದು, ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಿಡಿಕಾರುವ ಜೊತೆಗೆ ಶಾಸಕ ಯತ್ನಾಳ್ ಅವರನ್ನೂ ಬೈದಿದ್ದಾರೆ.
ತಮ್ಮನ್ನು ದೇಶದ್ರೋಹಿ ಎಂದಿರುವುದರ ಜತೆಗೆ ದ್ವೇಷ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದು ದೂರು ನೀಡಿದ್ದಾರೆ. ನಾನು ಯಾವುದೇ ದ್ವೇಷ ಭಾಷಣ ಮಾಡಿಲ್ಲ. ಅಲ್ಲದೆ, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ದ್ವೇಷ ಭಾಷಣದ ಪಿತಾಮಹರು ಎಂದು ವಾಗ್ದಾಳಿ ನಡೆಸಿದರು.
ಛಲವಾದಿ ನಾರಾಯಣಸ್ವಾಮಿ ಅವರನ್ನು ಇಷ್ಟುದಿನ ಬುದ್ಧಿವಂತರು ಮತ್ತು ಪ್ರಜ್ಞಾವಂತರು ಎಂದು ಭಾವಿಸಿದ್ದೆ. ಆದರೆ, ಅವರು ನೀಡಿದ ದೂರು ನೋಡಿದ ನಂತರ ಅವರಿಗೆ ಜ್ಞಾನವಿಲ್ಲ ಎಂದು ಅನಿಸುತ್ತಿದೆ. ಭಾಷಣದ ವೀಡಿಯೊವನ್ನು ನೋಡದೆ ಹೋಮ್ ಮಿನಿಸ್ಟರ್ ಮತ್ತು ಸಿಎಂ ಅವರಿಗೆ ಪತ್ರ ಬರೆಯುವುದು ಸರಿಯಲ್ಲ. ವಿಡಿಯೋದಲ್ಲಿ, ನಾನು ಏನು ಹೇಳಿದ್ದೇನೆ? ಅದು ದ್ವೇಷ ಭಾಷಣ ಹೇಗೆ ಆಗಲು ಸಾಧ್ಯ? ಅಂಧಭಕ್ತರು ಮತ್ತು ದೇಶದ್ರೋಹಿಗಳು ಈ ದೇಶಕ್ಕೆ ಮಾರಕ’ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ನಾನು ಯಾರನ್ನೂ ನಿರ್ದಿಷ್ಟವಾಗಿ ದೇಶದ್ರೋಹಿಗಳು ಎಂದು ಕರೆದಿಲ್ಲ. ಹೀಗಿರುವಾಗ ಛಲವಾದಿ ನಾರಾಯಣಸ್ವಾಮಿ ಅದನ್ನು ತಮಗೇ ಹೇಳಿದ್ದು ಎಂದು ಯಾಕೆ ಅಂದುಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.
ಛಲವಾದಿ ಅವರ ಮನಸ್ಸಿನಲ್ಲಿರುವುದನ್ನೇ ಅವರು ಹೊರಹಾಕುತ್ತಿದ್ದಾರೆ. ದ್ವೇಷ ಭಾಷಣದ ಮೊದಲ ಪಿತಾಮಹರೇ ಛಲವಾದಿ ನಾರಾಯಣಸ್ವಾಮಿ ಮತ್ತು ಎರಡನೇ ಪಿತಾಮಹ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಟೀಕಿಸಿದರು. ಯತ್ನಾಳ್ ನೋಡಿದ್ರೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಅದು ಯಾವುದೋ ಒಂದು ಕೋತಿಯ ಬ್ರೀಡ್ ಎಂದು ವಾಗ್ದಾಳಿ ನಡೆಸಿದರು.