ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಮಾಜಿ ಸಚಿವ ಜಮೀರ್ ಅಹ್ಮದ್ ಚರ್ಚೆ ನಡೆಸಿದ್ದಾರೆ.
ಇಂದು ಸಂಜೆ ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದು, ಎಲ್ಲಾ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಮುನಿಸಿನಿಂದಲೇ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಮಿಸ್ ಆಗಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುನಿಸು ತಣಿಸಲು ಜಮೀರ್ ಅಹ್ಮದ್ ಕಸರತ್ತು ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಉಪ ಚುನಾವಣೆ ಬೆಳವಣಿಗೆ ಮಾತ್ರವಲ್ಲದೆ, ಬೇರೆ ಬೇರೆ ಬೆಳವಣಿಗೆಗಳ ಬಗ್ಗೆಯೂ ಸಿದ್ದರಾಮಯ್ಯ ಅವರು ಜಮೀರ್ ಮೇಲೆ ಮುನಿಸಿಕೊಂಡಿದ್ದಾರೆ. ಹೀಗಾಗಿ ಮುನಿಸು ತಣಿಸಲು ಜಮೀರ್ ಅಹ್ಮದ್ ಕಸರತ್ತು ನಡೆಸಿದ್ದು, ಇಂದು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮುನಿಸಿಕೊಂಡಿದ್ದ ಜಮೀರ್ ಅಹ್ಮದ್ ಪ್ರಚಾರದಿಂದ ದೂರ ಉಳಿದಿದ್ದರು. ನಂತರ ದಾವಣಗೆರೆಗೆ ಹೋದರೂ ಪ್ರಚಾರ ಮಾಡಿರಲಿಲ್ಲ. ಇತ್ತೀಚೆಗೆ ಜಮೀರ್ ಅವರದ್ದು ಎನ್ನಲಾದ ದಾವಣಗೆರೆ ದಕ್ಷಿಣ ಚುನಾವಣೆ ಕುರಿತಾದ ಆಡಿಯೋ ವೈರಲ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಿದ್ಧರಾಮಯ್ಯ ಕೂಡ ಜಮೀರ್ ಬಗ್ಗೆ ಅಸಮಾಧಾನಗೊಂಡಿದ್ದು, ಜಮೀರ್ ಗೆ ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡು ಬಂದವರಿಗೆ ಗದರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಂತರ ಇಂದು ಸಿದ್ಧರಾಮಯ್ಯ ಅವರನ್ನು ಜಮೀರ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಿದ್ಧರಾಮಯ್ಯ ಅವರ ಸೂಚನೆಯಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿದ್ದಾರೆ. ಸದಾವಶಿವನಗರದ ನಿವಾಸದಲ್ಲಿ ಖರ್ಗೆ ಅವರನ್ನು ಭೇಟಿಯಾದ ಜಮೀರ್ ಅಹಮ್ಮದ್ ಸಚಿವ ಸ್ಥಾನ ಮತ್ತು ಉಳಿದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.