ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಡಸೂರು ಸಮೀಪ ಸಿಂಪೆಕೆರೆ ಬಳಿ ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಆನಂದ ಪೂಜಾರಿ(38) ಕೊಲೆಯಾದ ವ್ಯಕ್ತಿ. ಮೂಲತಃ ಹೆಗ್ಗೋಡು ಸಮೀಪದ ಮುಂಡಿಗೆಸರ ಗ್ರಾಮದವರಾದ ಆನಂದ ಪೂಜಾರಿ 15 ವರ್ಷಗಳ ಹಿಂದೆ ಮಡಸೂರು ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಅಲ್ಲೇ ನೆಲೆಸಿದ್ದರು. ಅಡಿಕೆ ಕೊನೆ ಕೊಯ್ಯುವುದು, ಔಷಧ ಸಿಂಪಡಣೆ ಸೇರಿ ಅಡಿಕೆ ತೋಟದ ಕೆಲಸಗಳನ್ನು ಮಾಡಿಕೊಂಡಿದ್ದರು.
ಮಂಗಳಾರ ರಾತ್ರಿ 8 ಗಂಟೆ ಸುಮಾರಿಗೆ ಅವರಿಗೆ ಫೋನ್ ಕರೆ ಬಂದಿದ್ದು, ಹೊರಗೆ ಹೋಗಿ ಬರುವುದಾಗಿ ಬೈಕ್ ನಲ್ಲಿ ತೆರಳಿದ್ದಾರೆ. ಆದರೆ ತಡರಾತ್ರಿಯಾದರೂ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಬದವರು ಅವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದೆ.
ಅವರಿಗಾಗಿ ಹುಡುಕಾಟ ನಡೆಸಿದಾಗ ಕೆರೆ ಪಕ್ಕದಲ್ಲಿ ರಸ್ತೆ ಬದಿ ಬೈಕ್ ಪತ್ತೆಯಾಗಿದೆ. ಸುತ್ತಮುತ್ತ ಹುಡುಕಾಡಿದಾಗ ಕಲ್ಲುಗಳ ನಡುವೆ ಆನಂದ ಅವರ ಮೃತದೇಹ ಕಂಡು ಬಂದಿದೆ. ಅವರನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು. ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೋಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ತನಿಖೆ ಕೈಗೊಂಡಿದ್ದಾರೆ.