ಚಿತ್ರದುರ್ಗ: ಹಸು ಮೇಯಿಸುತ್ತಿದ್ದ ಮಹಿಳೆಯ ಮೇಲೆ ಅಪ್ರಾಪ್ತ ಬಾಲಕ ಅಸಭ್ಯವಾಗಿ ವರ್ತಿಸಿದಾಗ ಪ್ರತಿರೋಧ ತೋರಿದ್ದಕ್ಕೆ, ವಿಷಯ ಎಲ್ಲಿ ಹೊರಬರುತ್ತದೋ ಎಂಬ ಆತಂಕದಲ್ಲಿ ಮಹಿಳೆಯನ್ನು ಮಾರಣಾಂತಿಕವಾಗಿ ಥಳಿಸಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆದಿವಾಲ ಭೋವಿ ಕಾಲೋನಿ ಗ್ರಾಮದ ಲವ (40), ಕುಶ (40), ತಿಪ್ಪೇಸ್ವಾಮಿ (38) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಕಳೆದ ಸೆಪ್ಟೆಂಬರ್.6ರಂದು ಹಿರಿಯೂರು ತಾಲ್ಲೂಕಿನ ಆದಿವಾಲ ಭೋವಿ ಕಾಲೋನಿ ಗ್ರಾಮದ ಸಮೀಪ ಗಂಗಮ್ಮ ಎಂಬುವರು ಹಸುಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅದೇ ಗ್ರಾಮದ ಅಪ್ರಾಪ್ತ ಬಾಲಕ ಆಕೆಯನ್ನು ಬಲವಂತವಾಗಿ ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಇದನ್ನು ತೀವ್ರವಾಗಿ ವಿರೋಧಿಸಿದ ಗಂಗಮ್ಮ ಜೋರಾಗಿ ಗಲಾಟೆ ಮಾಡಿದ್ದಾಳೆ.
ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಬಾಲಕನ ತಂದೆ ಲವ ಹಾಗೂ ಚಿಕ್ಕಪ್ಪಂದಿರಾದ ಕುಶ ಮತ್ತು ತಿಪ್ಪೇಸ್ವಾಮಿ ಪರಿಸ್ಥಿತಿ ಗಮನಿಸಿದ್ದಾರೆ. ಈ ವೇಳೆ ಆರೋಪಿಗಳ ತಂದೆ (ಬಾಲಕನ ತಾತ) ಪಾಟೀಲ್ ಹನುಮಂತಪ್ಪ, "ಈ ವಿಷಯ ಗ್ರಾಮಸ್ಥರಿಗೆ ತಿಳಿದರೆ ನಮ್ಮ ಮರ್ಯಾದೆ ಹೋಗುತ್ತದೆ" ಎಂದು ಹೇಳಿ ಗಂಗಮ್ಮಳನ್ನು ಕೊಲ್ಲುವಂತೆ ಪ್ರಚೋದನೆ ನೀಡಿದ್ದಾನೆ.
ಈ ಪರಿಣಾಮವಾಗಿ ಅಪ್ರಾಪ್ತ ಬಾಲಕ, ಆತನ ತಂದೆ ಹಾಗೂ ಇಬ್ಬರು ಚಿಕ್ಕಪ್ಪಂದಿರು ಸೇರಿ ಗಂಗಮ್ಮ ಅವರ ಮೇಲೆ ಮುಷ್ಟಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಗಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS Act-2023) ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಬಲೆಗೆ ಬಿದ್ದ ಆರೋಪಿಗಳು:
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಆರ್. ಶಿವಕುಮಾರ್ ಮಾರ್ಗದರ್ಶನದಲ್ಲಿ, ಹಿರಿಯೂರು ಡಿವೈಎಸ್ಪಿ ಬಿ.ಎಂ.ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಎ., ಪಿಎಸ್‌ಐಗಳಾದ ಮಹೇಶ್ ಗೌಡ, ಅನುಸೂಯ ಕೆ. ಹಾಗೂ ಸಿಬ್ಬಂದಿಯಾದ ತಿಪ್ಪಾಭೋವಿ, ಸಿದ್ದಪ್ಪ, ಪರಮೇಶ್, ಜಾಫರ್ ಸಾದಿಕ್ ಮತ್ತು ಖಾಸೀಂ ಸಾಬ್ ಅವರನ್ನೊಳಗೊಂಡ ತಂಡವು ಮಾಹಿತಿ ಕಲೆಹಾಕಿ, ತಲೆಮರೆಸಿಕೊಂಡಿದ್ದ ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..