ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ‘ವಿದ್ಯಾವಿಕಾಸ ಯೋಜನೆ’ಯಡಿ ಉಚಿತವಾಗಿ ವಿವಿಧ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್. ರವಿಕುಮಾರ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ರಾಜ್ಯದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ಸೇರಿದಂತೆ ಪೌಷ್ಟಿಕ ಆಹಾರ ಒದಗಿಸುತ್ತಿರುವ ಸಮಗ್ರ ವಿವರಗಳನ್ನು ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ದೊರೆಯುವ ಪ್ರಮುಖ ಉಚಿತ ಸೌಲಭ್ಯಗಳು:
ಉಚಿತ ಸಮವಸ್ತ್ರ: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಎರಡು ಜೊತೆ ಸಮವಸ್ತ್ರಗಳನ್ನು ಒದಗಿಸಲಾಗುತ್ತಿದೆ.
ಉಚಿತ ಪಠ್ಯಪುಸ್ತಕ ಹಾಗೂ ಕಲಿಕಾ ಸಾಮಗ್ರಿ: 1 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು, 4 ರಿಂದ 9ನೇ ತರಗತಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳು, 1 ರಿಂದ 12ನೇ ತರಗತಿವರೆಗೆ ಶಾಲಾ ದಿನಚರಿ ಪುಸ್ತಕ, 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಮತ್ತು ಮೌಲ್ಯಶಿಕ್ಷಣ ಪಠ್ಯಪುಸ್ತಕಗಳು ಹಾಗೂ ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ‘ಧಿಂಭಾಖಾ ಬಾಲಚೇತನ’ ಚಟುವಟಿಕೆ ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ವಿತರಿಸಲಾಗುತ್ತಿದೆ.
ಉಚಿತ ಶೂ ಮತ್ತು ಸಾಕ್ಸ್: 1 ರಿಂದ 10ನೇ ತರಗತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್‌ಗಳನ್ನು ನೀಡಲಾಗುತ್ತಿದೆ.
ಮಧ್ಯಾಹ್ನದ ಉಪಹಾರ ಮತ್ತು ಕ್ಷೀರಭಾಗ್ಯ: ಪೂರ್ವ ಪ್ರಾಥಮಿಕ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿ ಹಾಲು, ಮಧ್ಯಾಹ್ನದ ಬಿಸಿಯೂಟ ಮತ್ತು ಪೂರಕ ಪೌಷ್ಟಿಕ ಆಹಾರದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಒದಗಿಸಲಾಗುತ್ತಿದೆ.
ಟೆಂಡರ್ ಹಾಗೂ ಅನುಷ್ಠಾನ ಪ್ರಕ್ರಿಯೆ ವಿವರ:
ಸರ್ಕಾರಿ ಶಾಲಾ ಮಕ್ಕಳಿಗೆ ಈ ಸೌಲಭ್ಯಗಳನ್ನು ವಿತರಿಸಲು ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿ ಅರ್ಹ ಸರಬರಾಜುದಾರರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಪಠ್ಯಪುಸ್ತಕ ಮುದ್ರಣ: ಕರ್ನಾಟಕ ಪಠ್ಯಪುಸ್ತಕ ಸಂಘದ ವತಿಯಿಂದ ಟೆಂಡರ್ ಕರೆಯಲಾಗಿದ್ದು, 2026-27ನೇ ಸಾಲಿಗೆ ಒಟ್ಟು 75.31 ಕೋಟಿಗೂ ಅಧಿಕ (753,13,43,561) ಪುಟಗಳ ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕೆ ಪ್ರತಿ ಪುಟಕ್ಕೆ ಸರಾಸರಿ 32 ಪೈಸೆಯಂತೆ (ಜಿಎಸ್‌ಟಿ ಒಳಗೊಂಡಂತೆ) ಒಟ್ಟು ಅಂದಾಜು 239 ಕೋಟಿ ರೂ. ವೆಚ್ಚ ನಿಗದಿಪಡಿಸಲಾಗಿದೆ.
ಸಮವಸ್ತ್ರ ವಿತರಣೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮವಸ್ತ್ರ ಖರೀದಿಸಲಾಗಿದ್ದು, ಉಳಿದ ಪ್ರಮಾಣವನ್ನು ಪಾರದರ್ಶಕ ಕಾಯ್ದೆಯನ್ವಯ ಇ-ಟೆಂಡರ್ ಮೂಲಕ ವಿವಿಧ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದಕ್ಕಾಗಿ ಒಟ್ಟು 154.72 ಕೋಟಿ ರೂ. ಮೊತ್ತ ನಿಗದಿಯಾಗಿದ್ದು, ವಿದ್ಯಾರ್ಥಿಯ ಮೊದಲನೇ ಜೊತೆಗೆ 218.71 ರೂ. ಹಾಗೂ ಎರಡನೇ ಜೊತೆಗೆ 211.08 ರೂ. ವೆಚ್ಚ ತಗಲುತ್ತದೆ.
ಶೂ, ಸಾಕ್ಸ್ ಮತ್ತು ಸ್ಯಾಂಡಲ್: ಶೂ ಮತ್ತು ಸಾಕ್ಸ್ ಪೂರೈಕೆಗಾಗಿ ಹರಿಯಾಣ ಮೂಲದ ‘ಎಂ/ಎಸ್ ಮಂಜೀತ್ ಪ್ಲಾಸ್ಟಿಕ್ ಇಂಡಸ್ಟ್ರೀಸ್’ ಹಾಗೂ ಉತ್ತರ ಪ್ರದೇಶ ಮೂಲದ ‘ಎಂ/ಎಸ್ ಪವರ್ ಟೆಕ್ ಎಲೆಕ್ಟ್ರೋ ಇನ್ಫ್ರಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದೆ. ಈ ವಿಭಾಗದಲ್ಲಿ ಶೂ-ಸಾಕ್ಸ್ ಹಾಗೂ ಸ್ಯಾಂಡಲ್ ವಿತರಣೆಗಾಗಿ ಒಟ್ಟು 72.31 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳ ಹಾಜರಾತಿ ಹೆಚ್ಚಿಸಲು ಹಾಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ವೃದ್ಧಿಸಲು ಸರ್ಕಾರ ಬದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.




