ಸಾಗರ: ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಪೊಲೀಸ್ ಠಾಣಾ ಕಟ್ಟಡ ಇಂದು ಸಾಕಾರಗೊಂಡಿದ್ದು, ಜನರ ನಿರೀಕ್ಷೆಯನ್ನು ಈಡೇರಿಸಿದ ತೃಪ್ತಿ ನಮಗಿದೆ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಕಾರ್ಗಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಠಾಣಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಸುಸಜ್ಜಿತ ಠಾಣೆಯ ಅಗತ್ಯವಿತ್ತು ಎಂದರು.

ಹಿಂದೆ ಡಾ. ಜಿ. ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದ ಕಾಲದಲ್ಲೇ ಕ್ಷೇತ್ರಕ್ಕೆ ಎರಡು ಪೊಲೀಸ್ ಠಾಣೆಗಳು ಮಂಜೂರಾಗಿದ್ದವು. ಆ ಪೈಕಿ ಆನಂದಪುರಂ ಠಾಣೆ ಹಾಗೂ ಸಿಬ್ಬಂದಿ ವಸತಿಗೃಹಗಳ ಕಾಮಗಾರಿ ಮುಗಿದು ಈಗಾಗಲೇ ಉದ್ಘಾಟನೆಗೊಂಡಿದೆ. ಕಾರ್ಗಲ್ ಠಾಣಾ ಕಟ್ಟಡವೂ ಪೂರ್ಣಗೊಂಡಿತ್ತಾದರೂ, ಗೃಹ ಸಚಿವರಿಂದಲೇ ಉದ್ಘಾಟನೆ ಮಾಡಿಸಬೇಕೆಂಬ ಕಾರಣಕ್ಕೆ ತುಸು ವಿಳಂಬವಾಯಿತು ಎಂದು ಶಾಸಕರು ವಿವರಿಸಿದರು.
ಪ್ರಸ್ತುತ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿ, ಜೋಗ-ಕಾರ್ಗಲ್ ವ್ಯಾಪ್ತಿಯಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿರುವುದರಿಂದ ಠಾಣೆ ಕಾರ್ಯಾರಂಭ ತುರ್ತಾಗಿ ಆಗಬೇಕಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಸರಳವಾಗಿ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಕಟ್ಟಡವನ್ನು ಅತ್ಯಂತ ಆಕರ್ಷಕವಾಗಿ ಹಾಗೂ ಗುಣಮಟ್ಟದಿಂದ ನಿರ್ಮಿಸಿದ ಗುತ್ತಿಗೆದಾರ ಚಂದ್ರಕಾಂತ್ ಅವರ ಕಾರ್ಯವೈಖರಿಯನ್ನು ಶಾಸಕರು ಮುಕ್ತಕಂಠದಿಂದ ಶ್ಲಾಘಿಸಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಇದೊಂದು ಮಾದರಿ ಮತ್ತು ಸುಂದರ ಪೊಲೀಸ್ ಠಾಣೆಯಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಮಾತನಾಡಿದ ಶಾಸಕರು, ಪೊಲೀಸ್ ಇಲಾಖೆ ಸದಾ ಖಡಕ್ ಆಗಿರಬೇಕು; ಸೈಲೆಂಟ್ ಆಗಿದ್ದರೆ ಇಲಾಖೆಗೆ ಘನತೆ ಬರುವುದಿಲ್ಲ ಎಂದರು. ಇದೇ ವೇಳೆ ಸ್ಥಳೀಯ ಅಧಿಕಾರಿಗಳ ಬಗ್ಗೆ ಹಾಸ್ಯಭರಿತವಾಗಿ ಕಾಲೆಳೆದ ಅವರು, ಅಧಿಕಾರಿಗಳು ಚುರುಕಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಗಣೇಶೋತ್ಸವ ಸೇರಿದಂತೆ ಸಾರ್ವಜನಿಕ ಹಬ್ಬ-ಹರಿದಿನಗಳು ಶಾಂತಿಯುತವಾಗಿ ನಡೆಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಸಾಗರ ನಗರಕ್ಕೂ ಬೇಕಿದೆ ಹೊಸ ಪೊಲೀಸ್ ಠಾಣೆ: ಶಾಸಕರಿಗೆ ಮನವಿ ಮಾಡಿದ ಶಿವಮೊಗ್ಗ ಎಸ್ಪಿ ನಿಖಿಲ್.ಬಿ
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಮಾತನಾಡಿ, ಕಾರ್ಗಲ್‌ನಲ್ಲಿ ಸುಸಜ್ಜಿತ ನೂತನ ಪೊಲೀಸ್ ಠಾಣೆ ನಿರ್ಮಾಣವಾಗಿರುವ ಮಾದರಿಯಲ್ಲೇ, ಮಲೆನಾಡು ಹಾಗೂ ಕರಾವಳಿಯ ಸಂಪರ್ಕ ಕೊಂಡಿಯಾಗಿರುವ ಸಾಗರ ನಗರಕ್ಕೂ ಹೊಸ ಪೊಲೀಸ್ ಠಾಣಾ ಕಟ್ಟಡದ ಅಗತ್ಯವಿದ್ದು, ಸೂಕ್ತ ನಿವೇಶನ ಒದಗಿಸಿ ಕಟ್ಟಡ ಮಂಜೂರು ಮಾಡಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಸಾಗರ ನಗರದ ಮೂಲಕವೇ ಹಾದುಹೋಗುತ್ತದೆ. ಯಾರು ಕರಾವಳಿ ಭಾಗಕ್ಕೆ ತೆರಳಬೇಕೆಂದರೂ ಸಾಗರ ಮಾರ್ಗವಾಗಿಯೇ ಪ್ರಯಾಣಿಸಬೇಕಿದೆ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆಯ ಹಿನ್ನೆಲೆಯಲ್ಲಿ ಸಾಗರ ನಗರದಲ್ಲೂ ಸುಸಜ್ಜಿತವಾದ ನೂತನ ಪೊಲೀಸ್ ಠಾಣೆಯ ಅಗತ್ಯವಿದೆ. ಈ ಸಂಬಂಧ ಈಗಾಗಲೇ ಶಾಸಕರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರಿ ಮಟ್ಟದಲ್ಲಿ ಒತ್ತಡ ಹೇರಿ ನಿವೇಶನ ಮತ್ತು ಹೊಸ ಠಾಣೆ ಕಟ್ಟಡ ಮಂಜೂರು ಮಾಡಿಸಿಕೊಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರಲ್ಲಿ ಕೋರಿದರು.
ಪೊಲೀಸ್ ಇಲಾಖೆ ಇರುವುದೇ ಸಾರ್ವಜನಿಕರ ಹಿತರಕ್ಷಣೆ ಮತ್ತು ಸೇವೆಗಾಗಿ. ನಮ್ಮ ಹೃದಯದಲ್ಲಿ ಯಾವುದೇ ಕಲ್ಮಷವಿಲ್ಲದೆ, ಪ್ರಾಮಾಣಿಕ ಸೇವೆಯ ಆಶಯದೊಂದಿಗೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ಪೊಲೀಸರ ಕಾರ್ಯವೈಖರಿ ಮತ್ತು ವರ್ತನೆ ಕುರಿತು ಸ್ವಾರಸ್ಯಕರವಾಗಿ ಮಾತನಾಡಿದ ಅವರು, ಕರ್ತವ್ಯದ ಸಂದರ್ಭದಲ್ಲಿ ಪೊಲೀಸರು ಕೊಂಚ ಒರಟಾಗಿ ಅಥವಾ ಕಠಿಣವಾಗಿ ಮಾತನಾಡಬಹುದು. ಆದರೆ ಆ ಮಾತಿನ ಹಿಂದೆ ಸಾರ್ವಜನಿಕರ ರಕ್ಷಣೆ ಮತ್ತು ಕಾನೂನು ಪಾಲನೆಯ ಉದ್ದೇಶವಿರುತ್ತದೆಯೇ ವಿನಃ ಯಾವುದೇ ದುರುದ್ದೇಶವಿರುವುದಿಲ್ಲ. ಪೊಲೀಸರು ಮೆತ್ತಗೆ, ಸಾವಕಾಶವಾಗಿ ಮಾತನಾಡುತ್ತಾ ಕೂತರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗುತ್ತದೆ ಎಂದು ಹಾಸ್ಯಭರಿತವಾಗಿಯೇ ವಿವರಿಸಿದರು.
ಸಿಬ್ಬಂದಿಗೆ ಹೊಸ ಹುರುಪು, ಚೈತನ್ಯ ತಂದಿದೆ: ಸಾಗರ ಎಎಸ್ಪಿ ಡಾ. ಬೆನಕ ಪ್ರಸಾದ್
ಸಾಗರ ಉಪವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಡಾ. ಬೆನಕ ಪ್ರಸಾದ್ ಮಾತನಾಡಿ, ಸಾರ್ವಜನಿಕರ ಆಶೋತ್ತರಗಳು, ನೋವು ಹಾಗೂ ದೂರುಗಳಿಗೆ ಪೊಲೀಸ್ ಇಲಾಖೆ ಸದಾ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಉತ್ತಮ ಪರಿಸರ ಹಾಗೂ ಪೂರಕ ವಾತಾವರಣವಿದ್ದಾಗ ಕರ್ತವ್ಯ ನಿರ್ವಹಿಸಲು ಹೊಸ ಹುರುಪು ಮತ್ತು ಚೈತನ್ಯ ಬರುತ್ತದೆ. ನೂತನ ಕಟ್ಟಡ ನಿರ್ಮಾಣದಿಂದ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಲಿದ್ದು, ಸಾರ್ವಜನಿಕ ಸೇವೆಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ನೂತನ ಕಟ್ಟಡವನ್ನು ಸೂಕ್ತ ಮಾಧ್ಯಮವಾಗಿ ಬಳಸಿಕೊಂಡು, ಈ ಭಾಗದ ನಾಗರಿಕರ ಆಶೋತ್ತರಗಳಿಗೆ ಇಲಾಖೆ ಸದಾ ಧ್ವನಿಯಾಗಲಿದೆ. ಜನರು ಯಾವುದೇ ನೋವು ಅಥವಾ ದೂರುಗಳನ್ನು ಹೊತ್ತು ಠಾಣೆಗೆ ಬಂದಾಗ ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಇದೇ ವೇಳೆ, ನೂತನ ಠಾಣಾ ಕಟ್ಟಡ ನಿರ್ಮಾಣ ಕಾರ್ಯ ಸಾಕಾರಗೊಳ್ಳಲು ಸಹಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಹಾಗೂ ಪ್ರತ್ಯಕ್ಷ-ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಕಾರ್ಗಲ್ ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿ ಎಂ.ಕೆ.ಸುರೇಶ್, ಸಿಗಂದೂರು ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮ ಲೋಕೇಶ್ವರಿ-ಗೀತಾ ಶೇಟ್ ಪ್ರಾರ್ಥನೆಯೊಂದಿಗೆ ಆರಂಭಗೊಂಡರೇ, ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ಶೆಟ್ಟಿ ಸ್ಪಾಗತಿಸಿದರೇ, ಸಾಗರ ಪೇಟೆ ಠಾಣೆಯ ಪಿಐ ಪುಲ್ಲಯ್ಯ ರಾಥೋಡ್ ವಂದಿಸಿದರು. ಈ ಕಾರ್ಯಕ್ರಮವನ್ನು ಗೀತಾ ಶೇಟ್ ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..