LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಸ್ತೂರಿರಂಗನ್ ವರದಿ ರದ್ದು, ಅಡಿಕೆ ಬೆಳೆಗಾರರ ರಕ್ಷಣೆಗೆ ಶಾಸಕ ಅರಗ ಜ್ಞಾನೇಂದ್ರ ಆಗ್ರಹ

ತೀರ್ಥಹಳ್ಳಿ: ಬೆಂಗಳೂರಿನಲ್ಲಿ ಕುಳಿತು ಜನರ ಅಹವಾಲುಗಳನ್ನು ಸ್ವೀಕರಿಸುವ ಬದಲು, ನೇರವಾಗಿ ಜನರ ಬಳಿಗೇ ಬಂದು ಅವರ ಆತಂಕವನ್ನು ನಿವಾರಿಸಲು ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಚಿವ ಮಧು ಬಂಗಾರಪ್ಪ ಅವರ ಪ್ರಯತ್ನ ಶ್ಲಾಘನೀಯ ಎಂದು ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸ್ವಕ್ಷೇತ್ರದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸಿಎಂ ಡಿ.ಕೆ ಶಿವಕುಮಾರ್ ಸಾರ್ವಜನಿಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಮಲೆನಾಡಿನ ರೈತರು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಕಸ್ತೂರಿರಂಗನ್ ವರದಿ, ಅರಣ್ಯ ಇಲಾಖೆಯ ನಿರ್ಬಂಧಗಳು ಹಾಗೂ ಅಡಿಕೆ ಮಾರುಕಟ್ಟೆಯ ಗಂಭೀರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರು.

ಭಯ ಮತ್ತು ಅನಿಶ್ಚಿತತೆಯಲ್ಲಿ ಮಲೆನಾಡಿನ ಜನತೆ

ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿರುವುದಕ್ಕೆ ಅವರಲ್ಲಿ ಮನೆಮಾಡಿರುವ ತೀವ್ರ ಆತಂಕವೇ ಕಾರಣ ಎಂದು ಆರಗ ಜ್ಞಾನೇಂದ್ರ ವಿವರಿಸಿದರು.

ನಾಳೆ ಬೆಳಿಗ್ಗೆ ನಮ್ಮ ಪರಿಸ್ಥಿತಿ ಏನಾಗಬಹುದು, ಬೆಳೆದ ಬೆಳೆ ಉಳಿಯುತ್ತದೆಯೋ ಇಲ್ಲವೋ ಅಥವಾ ನಮ್ಮನ್ನು ಒಕ್ಕಲೆಬ್ಬಿಸುತ್ತಾರೋ ಎಂಬ ಭೀತಿಯಲ್ಲಿ ಜನರು ಬದುಕುತ್ತಿದ್ದಾರೆ. ಈ ಆತಂಕದ ಕ್ಷಣಗಳು ದಶಕಗಳಿಂದ ಮುಂದುವರಿದಿದ್ದು, ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಎಲ್ಲಾ ಪಕ್ಷಗಳು ಒಟ್ಟಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಕಸ್ತೂರಿರಂಗನ್ ವರದಿ ಮತ್ತು ನೈಜ ಸಮೀಕ್ಷೆಯ ಅನಿವಾರ್ಯತೆ

2009 ರಿಂದಲೂ ಕಸ್ತೂರಿರಂಗನ್ ಹಾಗೂ ಗಾಡ್ಗೀಳ್ ವರದಿಗಳು ಮಲೆನಾಡಿನ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದ ಅವರು, ಇದರ ಹಿಂದೆ ವಿದೇಶಿ ಅನುದಾನ ಪಡೆಯುವ ಕೆಲವು ಪರಿಸರ ಸಂಘಟನೆಗಳ ಹುನ್ನಾರವಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರ ಸಮ್ಮುಖದಲ್ಲಿ ನಡೆದ ಸಭೆಯ ಪರಿಣಾಮವಾಗಿ ಸಂಜಯ್ ಕುಮಾರ್ ನೇತೃತ್ವದ ಸಮಿತಿ ರಚನೆಯಾಗಿದ್ದು, ಸಮಿತಿಯ ಅವಧಿ ವಿಸ್ತರಣೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಕನಿಷ್ಠ ಒಂದು ವರ್ಷದ ಕಾಲಾವಕಾಶ ಪಡೆದು, ಕೇರಳ ಮಾದರಿಯಲ್ಲಿ ಸ್ಥಳೀಯ ವಾಸ್ತವ ಸ್ಥಿತಿಯ ಬಗ್ಗೆ ಸಮಗ್ರ ಸರ್ವೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಸಂಘರ್ಷ

ಹಿಂದೆ ಬಗರ್‌ಹುಕುಂ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮಂಜೂರಾದ ಹಕ್ಕುಪತ್ರಗಳನ್ನು ಅರಣ್ಯ ಇಲಾಖೆಯು ಎಸಿ ಕೋರ್ಟ್‌ಗಳ ಮೂಲಕ ರದ್ದು ಮಾಡಲು ಮುಂದಾಗುತ್ತಿರುವುದು ಜನರನ್ನು ಕಂಗಾಲಾಗಿಸಿದೆ. 1932ರಲ್ಲಿ ಮಹಾರಾಜರ ಕಾಲದಲ್ಲಿ ನೀಡಲಾಗಿದ್ದ ಮಂಜೂರಾತಿಗಳಿಗೂ ಇಂದು ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದೆ. ಇಂತಹ ಕಾನೂನು ಗೊಂದಲಗಳಿಂದ ಜನಸಾಮಾನ್ಯರು ಕಂಗಾಲಾಗಿದ್ದು, ಈ ರೀತಿಯ ಪ್ರಕರಣಗಳನ್ನು ತಕ್ಷಣವೇ ನಿಲ್ಲಿಸಬೇಕಿದೆ. ಇದೇ ರೀತಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಲಾದ ಜಮೀನಿನ ಡಿನೋಟಿಫಿಕೇಶನ್ ಗೊಂದಲವನ್ನು ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಬಗೆಹರಿಸಿ ಸಂತ್ರಸ್ತರಿಗೆ ನೆಮ್ಮದಿ ನೀಡಬೇಕು ಎಂದರು.

ಅಭಯಾರಣ್ಯಗಳ ವ್ಯಾಪ್ತಿ ಹಾಗೂ ಬಫರ್ ಝೋನ್ ಸಂಕಷ್ಟ

ಶಿವಮೊಗ್ಗ ಜಿಲ್ಲೆಯ ಸುಮಾರು 157 ಹಳ್ಳಿಗಳು ಅರಣ್ಯ ನಿಯಮಗಳಿಂದ ತೀವ್ರ ಬಾಧಿತವಾಗಿವೆ. ಸೋಮೇಶ್ವರ, ಶೆಟ್ಟಿಹಳ್ಳಿ, ಕುದುರೆಮುಖ ಮುಂತಾದ ಅಭಯಾರಣ್ಯಗಳ 10 ಕಿಲೋಮೀಟರ್ ಬಫರ್ ಝೋನ್ ನಿರ್ಧಾರದಿಂದ ಇಡೀ ತಾಲೂಕೇ ನಿಯಂತ್ರಣಕ್ಕೆ ಸಿಲುಕುತ್ತದೆ. ಈ ಕಾಯ್ದೆಗಳಿಂದಾಗಿ ಸಣ್ಣ ರಸ್ತೆ ಅಭಿವೃದ್ಧಿಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಮೃತಪಟ್ಟರೆ ಶವಸಂಸ್ಕಾರ ಮಾಡಲು ಜಾಗವಿಲ್ಲದಂತಹ ಅಮಾನವೀಯ ಸ್ಥಿತಿ ನಿರ್ಮಾಣವಾಗಿದ್ದು, ಈ ಎಲ್ಲಾ ಕಾಯ್ದೆಗಳ ಬಿಗಿಮುಷ್ಟಿಯಿಂದ ಜನರನ್ನು ಮುಕ್ತಗೊಳಿಸಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸರ್ಕಾರದ ಬೆಂಬಲದ ತುರ್ತು

ದೇಶದ ಶೇಕಡಾ 70ರಷ್ಟು ಅಡಿಕೆಯನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತಿದ್ದು, ಮಲೆನಾಡಿನ ಬಹುತೇಕರು ಕೇವಲ 1-2 ಎಕರೆ ಜಮೀನು ಹೊಂದಿರುವ ಸಣ್ಣ ಬೆಳೆಗಾರರಾಗಿದ್ದಾರೆ. ಇತ್ತೀಚೆಗೆ ಗುಟ್ಕಾ ನಿಷೇಧ ಕುರಿತಾದ ಹೇಳಿಕೆಗಳಿಂದಾಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ಸುಮಾರು 5,000 ರೂಪಾಯಿಗಳಷ್ಟು ಬೆಲೆ ಕುಸಿದಿದೆ. ಸರ್ಕಾರವು ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ನಿಲ್ಲುವುದಾಗಿ ಬಲವಾದ ಹಾಗೂ ಸ್ಪಷ್ಟವಾದ ಹೇಳಿಕೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಬೆಲೆ ಮತ್ತೆ ಏರಿಕೆಯಾಗುವಂತೆ ಮಾಡಬೇಕು ಮತ್ತು ರೈತರಲ್ಲಿ ಧೈರ್ಯ ತುಂಬಬೇಕು ಎಂದು ಅವರು ವಿನಂತಿಸಿದರು.

ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಎಲ್ಲಾ ವಿಷಯಗಳ ಕುರಿತು ವಿಸ್ತೃತವಾಗಿ ಧ್ವನಿ ಎತ್ತುವುದಾಗಿ ತಿಳಿಸಿದ ಅವರು, ಸರ್ಕಾರದಿಂದ ರೈತರಿಗೆ ನ್ಯಾಯ ಸಿಗಲಿ ಎಂದು ಆಶಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲೆನಾಡಿನ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಶರಾವತಿ ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಿ: ಸಿಎಂಗೆ ಬಿ.ಆರ್ ಜಯಂತ್ ಮನವಿಕಸ್ತೂರಿರಂಗನ್ ವರದಿ ರದ್ದು, ಅಡಿಕೆ ಬೆಳೆಗಾರರ ರಕ್ಷಣೆಗೆ ಶಾಸಕ ಅರಗ ಜ್ಞಾನೇಂದ್ರ ಆಗ್ರಹದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಅವರ ಪತ್ನಿ, ಪುತ್ರ, ಪೋಷಕರಿಗೆ ‘ಅನ್ ಮ್ಯಾಪ್ಡ್’ ವರ್ಗದಡಿ SIR ನೋಟಿಸ್ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ 2025: ಮುಂಚೂಣಿ ರಾಜ್ಯಗಳ ಸಾಲಿನಲ್ಲಿ ಕರ್ನಾಟಕಕಸ್ತೂರಿ ರಂಗನ್ ವರದಿ ಜಾರಿಗೆ ಒಪ್ಪಲ್ಲ, ಮಲೆನಾಡಿಗರ ರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ.ಕೆ.ಶಿವಕುಮಾರ್ ಭರವಸೆಭಾವೈಕ್ಯತೆಗೆ ಸಾಕ್ಷಿಯಾದ ಮದ್ದೂರು ಗಣೇಶೋತ್ಸವ: ಕಹಿ ನೆನಪು ಮರೆತು ಸಂಭ್ರಮದಲ್ಲಿ ಒಂದಾದ ಹಿಂದೂ-ಮುಸ್ಲಿಂ ಬಾಂಧವರುಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಎಫೆಕ್ಟ್: ರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆತಮ್ಮ ಎರಡನೇ ಮಗು ಸ್ವಾಗತಿಸಿದ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ.!