ಬೆಂಗಳೂರು : ಮುಖ್ಯಮಂತ್ರಿ ಚಂದ್ರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಅವರೊಂದಿಗೆ ಒಡನಾಟ ಹೊಂದಿರುವುದಾಗಿ ಸಿದ್ದರಾಮಯ್ಯ ಅವರು ಹೇಳಿದರು. ಚಂದ್ರು ಅವರ ಈ ವಿಶೇಷ ಸಂದರ್ಭದಲ್ಲಿ ಅವರ ಧರ್ಮಪತ್ನಿ, ಕುಟುಂಬದ ಸದಸ್ಯರು ಹಾಗೂ ಒಡನಾಡಿಗಳು ಸೇರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದು ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನವನ್ನು ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ನಾಟಕದ ಪ್ರಮುಖ ಪಾತ್ರಧಾರಿ ಮುಖ್ಯಮಂತ್ರಿ ಚಂದ್ರು ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕಾಲ ಬಹಳ ವೇಗವಾಗಿ ಉರುಳುತ್ತದೆ. ಮುಖ್ಯಮಂತ್ರಿ ಚಂದ್ರು ಅವರು ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಕ್ಕೆ ಹಾಗೂ ರಂಗಭೂಮಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರಿಗೆ ಈಗ 73 ವರ್ಷ ತುಂಬಿದ್ದರೂ ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಚಂದ್ರು ಅವರು 93 ನಾಟಕಗಳಲ್ಲಿ ಅಭಿನಯಿಸಿದ್ದು, ಒಂದೊಂದು ನಾಟಕವನ್ನು ಸಿದ್ಧಪಡಿಸುವುದು, ನಟಿಸುವುದು ಅಷ್ಟು ಸುಲಭದ ವಿಷಯವಲ್ಲ. ನಾಟಕದಲ್ಲಿ 93ನೇ ಪ್ರಯೋಗವನ್ನು ಪೂರೈಸಿರುವುದು ವಿಶೇಷ ಸಾಧನೆ. ಸಿನಿಮಾದಲ್ಲೂ ಅವರು 530ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದೆ. ಈಗ ಮಾಜಿ ಮುಖ್ಯಮಂತ್ರಿ ಆಗಿದ್ದೇನೆ. ಆದರೆ ಚಂದ್ರು ಅವರು ಮಾತ್ರ ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ. ಅವರು ಶಾಶ್ವತ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಚಂದ್ರು ಅವರ ಅದ್ಭುತ ಅಭಿನಯದಿಂದ ‘ಮುಖ್ಯಮಂತ್ರಿ’ ನಾಟಕವನ್ನು ವೀಕ್ಷಿಸುವ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ. ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳು ನಡೆದಿದ್ದರೂ, ತಪ್ಪುಗಳು ಇನ್ನೂ ಮುಂದುವರಿದಿವೆ. ಅಂತಹ ತಪ್ಪುಗಳನ್ನು ಸಮಾಜದ ಮುಂದೆ ಎತ್ತಿ ತೋರಿಸುವ ಕೆಲಸವನ್ನು ರಂಗಭೂಮಿ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸಿನಿಮಾದಲ್ಲಿ ನಿರ್ದೇಶಕರು ಇರುವುದರಿಂದ ತಪ್ಪಾದರೆ ‘ಕಟ್’ ಹೇಳಿ ಮತ್ತೊಂದು ದೃಶ್ಯವನ್ನು ಚಿತ್ರೀಕರಿಸಲು ಅವಕಾಶವಿರುತ್ತದೆ. ಆದರೆ ರಂಗಭೂಮಿಯಲ್ಲಿ ಅಂತಹ ಅವಕಾಶವಿಲ್ಲ. ಪ್ರೇಕ್ಷಕರ ಎದುರು ನೇರವಾಗಿ ಅಭಿನಯಿಸಬೇಕಾಗುತ್ತದೆ. ಇದು ರಂಗಭೂಮಿಯ ಕಲಾವಿದರಿಗೆ ಇರುವ ದೊಡ್ಡ ಸವಾಲು ಎಂದು ಹೇಳಿದರು.
ತಮ್ಮ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ರಾಜಕೀಯ ಪ್ರವೇಶವನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು “ನಾನು 1983ರಲ್ಲಿ ಶಾಸಕನಾದೆ. ಚಂದ್ರು ಅವರು 1985ರಲ್ಲಿ ಶಾಸಕರಾದರು. ರಾಮಕೃಷ್ಣ ಹೆಗಡೆಯವರು ಚಂದ್ರು ಅವರನ್ನು ರಾಜಕೀಯಕ್ಕೆ ಕರೆತಂದು ಶಾಸಕರನ್ನಾಗಿ ಮಾಡಿದರು. ಅವರು ಶಾಸಕರಾಗಿ, ಎಂಎಲ್ಸಿಯಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ನಾಡು ನುಡಿಗಾಗಿ ಅಪಾರವಾದ ಸೇವೆ ಸಲ್ಲಿಸಿ, ರಾಜ್ಯದಾದ್ಯಂತ ಸಂಚರಿಸಿ ಕನ್ನಡದ ಕಹಳೆ ಮೊಳಗಿಸಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಚಂದ್ರು ಅವರು ಇನ್ನಷ್ಟು ವರ್ಷಗಳ ಕಾಲ ಆರೋಗ್ಯದಿಂದ ಬದುಕಿ, ಇನ್ನಷ್ಟು ನಾಟಕಗಳಲ್ಲಿ ಅಭಿನಯಿಸಬೇಕು. ಅವರಿಗೆ ಭಗವಂತ ಆಯುಷ್ಯ ಮತ್ತು ಆರೋಗ್ಯ ನೀಡಲಿ ಎಂದು ಸಿದ್ದರಾಮಯ್ಯ ಶುಭ ಹಾರೈಸಿದರು.