ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್‌ನ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಆರಂಭದಲ್ಲೇ ಕದನ ಕಾವು ಪಡೆದುಕೊಂಡಿದೆ. ಪಂದ್ಯದ ಆರಂಭದಲ್ಲೇ ಅಬ್ಬರಿಸಿದ ಭಾರತದ ಓಪನರ್ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರೆ, ಮತ್ತೊಂದೆಡೆ ಪಾಕಿಸ್ತಾನದ ಸೈಮ್ ಅಯೂಬ್ ಸತತ ಎರಡು ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ತೀವ್ರ ಮುಜುಗರಕ್ಕೀಡಾಗಿದ್ದಾರೆ.
ಜಪಾನ್‌ನ ನಿಸ್ಶಿನ್‌ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಈ ಚಿನ್ನದ ಪದಕದ ಪಂದ್ಯದಲ್ಲಿ, ಭಾರತದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್‌ನ 5ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ನೀಡಿದ ಸುಲಭದ ಕ್ಯಾಚ್ ಒಂದನ್ನು ಹಾಗೂ ನಾಯಕ ಶ್ರೇಯಸ್ ಅಯ್ಯರ್ ನೀಡಿದ ಮತ್ತೊಂದು ಅವಕಾಶವನ್ನು ಸೈಮ್ ಅಯೂಬ್ ಬಿಟ್ಟುಕೊಟ್ಟರು. ಈ ಹಿನ್ನಡೆಯಿಂದಾಗಿ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಸಾಮರ್ಥ್ಯವನ್ನು ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದು, ‘ಪಾಕಿಸ್ತಾನಿ ಫೀಲ್ಡರ್‌ಗಳು ತಮ್ಮ ಹಳೆಯ ಸಂಪ್ರದಾಯವನ್ನು ಕಾಯ್ದುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡುತ್ತಿದ್ದಾರೆ.
ಸಿಕ್ಕ ಜೀವದಾನಗಳ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡ ಅಭಿಷೇಕ್ ಶರ್ಮಾ, ಬಿರುಗಾಳಿ ಬ್ಯಾಟಿಂಗ್ ನಡೆಸಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆರಂಭದಲ್ಲೇ ವೈಭವ್ ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡರೂ, ಅಭಿಷೇಕ್ ಅಬ್ಬರದಿಂದಾಗಿ ಭಾರತ ತಂಡ ಪವರ್‌ಪ್ಲೇನ 6 ಓವರ್‌ಗಳಲ್ಲಿ ಬರೋಬ್ಬರಿ 81 ರನ್ ಕಲೆಹಾಕಿತು.
ಇನ್ನು ಪಂದ್ಯ ಆರಂಭಕ್ಕೂ ಮುನ್ನವೇ ಟಾಸ್ ವೇಳೆಯಲ್ಲಿ ಭಾರತದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪಾಕಿಸ್ತಾನದ ನಾಯಕ ಸಾಹಿಬ್‌ಜಾದಾ ಫರ್ಹಾನ್ ಪರಸ್ಪರ ಹಸ್ತಲಾಘವ ಮಾಡದಿರುವುದು ಕ್ರೀಡಾಭಿಮಾನಿಗಳ ಗಮನಸೆಳೆದ ಮತ್ತೊಂದು ರೋಚಕ ಕ್ಷಣವಾಗಿತ್ತು.