ಚಿತ್ರದುರ್ಗ: ನಟ ಶಿವರಾಜ್‌ಕುಮಾರ್ ಅವರು ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ಅವರ ತೀರಾ ಹತ್ತಿರದಲ್ಲೇ ಪಟಾಕಿ ಸಿಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಪಟಾಕಿ ಸ್ಫೋಟದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅದೃಷ್ಟವಶಾತ್ ಶಿವರಾಜ್‌ಕುಮಾರ್ ಅವರಿಗೆ ಯಾವುದೇ ಗಾಯವಾಗಿಲ್ಲ.
ಚಿತ್ರದುರ್ಗ ನಗರದ ಖಾಸಗಿ ಶೋರೂಮ್‌ವೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಆಗಮಿಸಿದ್ದರು. ಅವರು ಶೋರೂಮ್ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಬಾಗಿಲಿನ ಬಳಿ ಹಚ್ಚಲಾಗಿದ್ದ ಫ್ಲವರ್ ಪಾಟ್ ಏಕಾಏಕಿ ಸಿಡಿದಿದೆ.
ಪಟಾಕಿ ಸಿಡಿದ ರಭಸಕ್ಕೆ ದೊಡ್ಡ ಶಬ್ದ ಕೇಳಿಸಿದ್ದು, ದಟ್ಟ ಹೊಗೆ ಕೂಡ ಆವರಿಸಿತ್ತು. ಪಟಾಕಿ ಶಿವರಾಜ್‌ಕುಮಾರ್ ಅವರ ತೀರಾ ಹತ್ತಿರದಲ್ಲೇ ಸಿಡಿದಿದ್ದರಿಂದ ಸ್ಥಳದಲ್ಲಿದ್ದ ಅಭಿಮಾನಿಗಳು ಹಾಗೂ ಭದ್ರತಾ ಸಿಬ್ಬಂದಿ ಕೆಲಕಾಲ ಗಾಬರಿಗೊಂಡಿದ್ದಾರೆ.
ತಕ್ಷಣವೇ ಭದ್ರತಾ ಸಿಬ್ಬಂದಿ ಶಿವರಾಜ್‌ಕುಮಾರ್ ಅವರನ್ನು ಸುತ್ತುವರಿದು ಸುರಕ್ಷಿತವಾಗಿ ಶೋರೂಮ್ ಒಳಗೆ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಶಿವಣ್ಣ ಕೂಡ ಸುರಕ್ಷಿತವಾಗಿದ್ದು, ಬಳಿಕ ಎಂದಿನಂತೆ ಅಭಿಮಾನಿಗಳೊಂದಿಗೆ ಬೆರೆತಿದ್ದಾರೆ.
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು, ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಬಂದಾಗ ಈ ರೀತಿಯಲ್ಲಿ ಪಟಾಕಿ ಸಿಡಿಸುವುದನ್ನು ತಪ್ಪಿಸಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
‘ಬೇಲ್’ ಸಿನಿಮಾ ಪ್ರಚಾರದಲ್ಲಿ ಶಿವಣ್ಣ
ಶಿವರಾಜ್‌ಕುಮಾರ್ ಸದ್ಯ ‘ಬೇಲ್’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಚಿತ್ರತಂಡ ಹೇಳಿದೆ.
ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದ್ದು, ಸಾಯಿ ಕುಮಾರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಚಿತ್ರದುರ್ಗಕ್ಕೆ ಆಗಮಿಸಿದ್ದ ಶಿವರಾಜ್‌ಕುಮಾರ್ ಕೂಡ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ಬೇಲ್’ ಸಿನಿಮಾ ಎಲ್ಲೆಡೆ ಚೆನ್ನಾಗಿ ಸಾಗುತ್ತಿದೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ದೊಡ್ಡ ಬಜೆಟ್ ಸಿನಿಮಾ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ ಎಂಬುದು ಸರಿಯಲ್ಲ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಅದನ್ನು ಸ್ವೀಕರಿಸುತ್ತಾರೆ ಎಂದು ಶಿವರಾಜ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.