LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ: ಕೇಂದ್ರದ ಬರ ಅಧ್ಯಯನ ತಂಡಕ್ಕೆ ಬಿಜೆಪಿ ಮನವಿ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, 50%ಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಕಡೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕಿದ್ದ ರಾಜ್ಯ ಸರ್ಕಾರ ರಾಜಕೀಯ ಕಿತ್ತಾಟದಲ್ಲೇ ಕಾಲ ಕಳೆಯುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.

ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ಬರ ಅಧ್ಯಯನ ತಂಡವನ್ನು ಕುಮಾರಕೃಪ ಅತಿಥಿಗೃಹದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಭೇಟಿಯಾದ ಆರ್.ಅಶೋಕ, ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ಬರ ಅಧ್ಯಯನ ತಂಡವನ್ನು ಭೇಟಿಯಾಗಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ವಿವರಿಸಲಾಗಿದೆ. ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಕೇಂದ್ರಕ್ಕೆ ಸಮಗ್ರವಾಗಿ ವರದಿ ಮಾಡಿ, ಹೆಚ್ಚಿನ ಬರ ಪರಿಹಾರ ಬಿಡುಗಡೆಗೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸಂಕಷ್ಟದಲ್ಲಿರುವುದು ರಾಜ್ಯ ಸರ್ಕಾರವಲ್ಲ, ನಮ್ಮ ರೈತರು. ಬರ ಬಂದ ನಂತರ ಸುಮಾರು ಹತ್ತು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಹಿತದೃಷ್ಟಿಯಿಂದ ಕೇಂದ್ರದ ತಂಡ ವಾಸ್ತವ ಪರಿಸ್ಥಿತಿಯನ್ನು ಗಮನಿಸಿ ವರದಿ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಬರ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರದ ತಂಡ ಶೀಘ್ರವಾಗಿ ವರದಿ ಸಲ್ಲಿಸುವ ಭರವಸೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ರೈತರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿರುವುದು ಸ್ವಾಗತಾರ್ಹ ಎಂದರು.

₹25,000 ಕೇಳಿದ್ದೇವೆ, ₹2,500 ಕೂಡ ಕೊಡಲಾಗುತ್ತಿಲ್ಲ

ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ₹2,500 ಪರಿಹಾರ ನೀಡುವುದಾಗಿ ಹೇಳಿದೆ. ಆದರೆ ಅದನ್ನೂ ಇದುವರೆಗೆ ಸರಿಯಾಗಿ ನೀಡಿಲ್ಲ. ಹಿಂದೆ ಪ್ರತಿ ತಾಲೂಕಿಗೆ ₹1 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರೂ ಆ ಹಣವೂ ಬಿಡುಗಡೆಯಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆಗೂ ಅಗತ್ಯ ಹಣ ನೀಡಿಲ್ಲ. ನಾವು ಒಂದು ಎಕರೆಗೆ ₹25,000 ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ ರಾಜ್ಯ ಸರ್ಕಾರ ಅದರ ಒಂದು ಭಾಗವನ್ನೂ ನೀಡಿಲ್ಲ. ರೈತರಿಗೆ ನೀಡಬೇಕಾದ ಪರಿಹಾರದ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ‌. ಆರ್ಥಿಕ ಇಲಾಖೆ ಪಾಪರ್ ಆಗಿರುವುದರಿಂದ ಸರ್ಕಾರ ಹೆಚ್ಚಿನ ಪರಿಹಾರ ಕೊಡುವುದು ಅನುಮಾನ. ತಲಾ ₹2500 ಪರಿಹಾರವೆಂದರೆ ಒಟ್ಟು ₹1800 ಕೋಟಿ ಆಗುತ್ತದೆ. ಅಷ್ಟು ಹಣ ರಾಜ್ಯ ಸರ್ಕಾರದ ಬಳಿ ಇಲ್ಲ ಎಂದರು.

2021-22ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದ ನೆರವಿಗಾಗಿ ಕಾಯದೆ, ತನ್ನದೇ ಸಂಪನ್ಮೂಲದಿಂದ NDRF ನಿಯಮಗಳಿಗಿಂತ ಹೆಚ್ಚಿನ ಪರಿಹಾರವನ್ನು ರೈತರಿಗೆ ನೀಡಿತ್ತು. ಅದೇ ರೀತಿಯ ಪರಿಹಾರವನ್ನು ಈಗಿನ ಕಾಂಗ್ರೆಸ್ ಸರ್ಕಾರವೂ ನೀಡಬೇಕು. ಬಿಜೆಪಿ ಸರ್ಕಾರ ಎಷ್ಟು ಪರಿಹಾರ ನೀಡಿತ್ತು ಎಂಬುದನ್ನು ವಿಧಾನಸಭೆಯಲ್ಲೂ ಚರ್ಚಿಸಲು ಕಾಂಗ್ರೆಸ್ ಸರ್ಕಾರ ಸಿದ್ಧವಿಲ್ಲ. ಆ ಸತ್ಯ ಹೊರಬಂದರೆ ತಮ್ಮ ವೈಫಲ್ಯ ಬಯಲಾಗುತ್ತದೆ ಎಂಬ ಭಯ ಕಾಂಗ್ರೆಸ್‌ಗೆ ಇದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಹಣದ ಕೊರತೆ: ಜನರ ಮೇಲೆ ತೆರಿಗೆಗಳ ಹೊರೆ

ಕಾಂಗ್ರೆಸ್ ಸರ್ಕಾರದ ಹಣಕಾಸಿನ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ರೈತರಿಗೆ ಪರಿಹಾರ ನೀಡಲು ಹಣವಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ. ಆದರೆ ಜನರ ಮೇಲೆ ಒಂದರ ಹಿಂದೆ ಒಂದರಂತೆ ತೆರಿಗೆ ಮತ್ತು ಬೆಲೆ ಏರಿಕೆಯ ಹೊರೆ ಹಾಕಲಾಗುತ್ತಿದೆ‌ಎಂದು ಅವರು ಹೇಳಿದರು.

ಬಸ್ ದರ ಏರಿಕೆ, ಮನೆ ತೆರಿಗೆ, ವಿದ್ಯುತ್ ಶುಲ್ಕ ಸೇರಿದಂತೆ ವಿವಿಧ ರೀತಿಯಲ್ಲಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ. ಕುಟುಂಬದಲ್ಲಿ ಮಹಿಳೆಯರಿಗೆ ಉಚಿತ ನೀಡಿ, ಉಳಿದ ಸದಸ್ಯರಾದ ಗಂಡಸರಿಗೆ ತೆರಿಗೆ ಹಾಕುತ್ತಾರೆ. ಒಂದು ಕುಟುಂಬದಿಂದ ತಿಂಗಳಿಗೆ ₹6000 ವಸೂಲಿ ಮಾಡಿದರೆ, ಒಂದು ಭಾಗ ಮುಖ್ಯಮಂತ್ರಿಗೆ, ಮತ್ತೊಂದು ಭಾಗ ರಾಹುಲ್ ಗಾಂಧಿಗೆ ಹಾಗೂ ಕೊನೆ ಭಾಗವನ್ನು ಗೃಹಲಕ್ಷ್ಮಿ ಮೂಲಕ ನೀಡಲಾಗುತ್ತದೆ. ಒಂದು ಕೈಯಲ್ಲಿ ಹಣ ಪಡೆದು ಮತ್ತೊಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಣ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ಮಾದರಿಯಾಗಿದೆ ಎಂದು ಆರೋಪಿಸಿದರು.

ಹಾಲಿನ ದರ ಏರಿಕೆ: ಕಾಂಗ್ರೆಸ್ ತನ್ನದೇ ಭರವಸೆ ಮರೆತಿದೆ

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನವನ್ನು ₹5ರಿಂದ ₹8ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು.‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳುತ್ತಾರೆ. ಹಾಗಿದ್ದರೆ ರೈತರಿಗೆ ನೀಡಬೇಕಾದ ಹೆಚ್ಚುವರಿ ₹3 ಪ್ರೋತ್ಸಾಹಧನವನ್ನು ಮೊದಲು ನೀಡಿ. ಹಾಲಿನ ದರ ಏರಿಕೆ ಮಾಡುವ ಅಗತ್ಯವೇ ಇರುವುದಿಲ್ಲ. ರೈತರಿಗೆ ನೀಡಬೇಕಾದ ಹಣವನ್ನು ನೀಡದೆ, ಗ್ರಾಹಕರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವುದು ಯಾವ ನ್ಯಾಯ?” ಎಂದು ಅವರು ಪ್ರಶ್ನಿಸಿದರು.

GST ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ‘ಚಾಣಕ್ಯತನ’ ನೋಡೋಣ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು GST ಸಭೆಗೆ ತೆರಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ, “ಇಷ್ಟು ವರ್ಷಗಳ ಕಾಲ ರಾಜ್ಯದ ಆರ್ಥಿಕ ಹಕ್ಕುಗಳ ಬಗ್ಗೆ ಗಂಭೀರವಾಗಿ ಮಾತನಾಡದವರು ಈಗ GST ಸಭೆಗೆ ಹೋಗುತ್ತಿದ್ದಾರೆ. ಅಲ್ಲಿ ರಾಜ್ಯದ ಪರವಾಗಿ ಏನೇನು ಬೇಡಿಕೆ ಇಡುತ್ತಾರೆ, ಅವರ ಚಾಣಕ್ಯತನ ಏನು ಎಂಬುದನ್ನು ಕಾದು ನೋಡೋಣ. ಎಲ್ಲಾ ರಾಜ್ಯಗಳ ಅಭಿಪ್ರಾಯದ ಆಧಾರದ ಮೇಲೆ ತೀರ್ಮಾನವಾಗಲಿದೆ ಎಂದರು.

ಬೆಂಗಳೂರಿನ ಪೊಲೀಸ್ ವ್ಯವಸ್ಥೆಯ ವಿಭಜನೆಗೆ ತೀವ್ರ ವಿರೋಧ

ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ಸರ್ಕಾರದ ನಿರ್ಧಾರವನ್ನು ಆರ. ಅಶೋಕ ತೀವ್ರವಾಗಿ ವಿರೋಧಿಸಿದರು.

ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ತನ್ನದೇ ಆದ ಗೌರವ ಮತ್ತು ಘನತೆ ಇದೆ. ವರ್ಷಗಳಿಂದ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಐದು ಕಮಿಷನರೇಟ್‌ಗಳಾಗಿ ವಿಭಜಿಸುವ ಅಗತ್ಯವೇನಿತ್ತು? ಇದು ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಲಿದೆ ಎಂದು ಹೇಳಿದರು.

ಬೆಂಗಳೂರು ಈಗಾಗಲೇ ಐದು ಪಾಲಿಕೆಗಳಾಗಿ ವಿಭಜನೆಯಾದ ನಂತರ ಆಡಳಿತ ಮತ್ತು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೀಗ ಪೊಲೀಸ್ ಇಲಾಖೆಯನ್ನೂ ಇದೇ ರೀತಿಯಲ್ಲಿ ವಿಭಜಿಸುವ ಮೂಲಕ ಸರ್ಕಾರ ಮತ್ತೊಂದು ಗೊಂದಲ ಸೃಷ್ಟಿಸುತ್ತಿದೆ. ಬೆಂಗಳೂರು ಪೊಲೀಸ್ ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯವಾಗಲಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಈ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಮೊದಲು ಈ ತುಘಲಕ್ ನಿರ್ಧಾರವನ್ನು ಕೈಬಿಟ್ಟು, ಇರುವ ಕಮಿಷನರೇಟ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಮಹಾನಗರದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿದ್ದು ಸಾಕು. ಈಗ ಪೊಲೀಸ್ ವ್ಯವಸ್ಥೆಯನ್ನೂ ಹಾಳು ಮಾಡಬೇಡಿ. ಈ ವಿಭಜನೆಯಿಂದ ಬೆಂಗಳೂರು ಜನತೆಗೆ ಯಾವುದೇ ಪ್ರಯೋಜನವಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ

ರೈತರಿಗೆ ಪರಿಹಾರವಿಲ್ಲ, ಕುಡಿಯುವ ನೀರಿಗೆ ಹಣವಿಲ್ಲ, ಜನರಿಗೆ ಬೆಲೆ ಏರಿಕೆಯ ಹೊರೆ, ಬೆಂಗಳೂರಿಗೆ ಅಸಮರ್ಪಕ ಆಡಳಿತ - ಇದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು ಅಧಿಕಾರದ ಕಿತ್ತಾಟದಲ್ಲಿ ಕಾಲ ಕಳೆಯುತ್ತಿರುವ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್.ಅಶೋಕ ಹೇಳಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಪಂಜಾಬ್ ಸಿಎಂ ‘ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿಕಲಬುರಗಿಯಲ್ಲಿ ತರಬೇತಿ ವಿಮಾನ ತುರ್ತು ಭೂ ಸ್ಪರ್ಷ: ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು!ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆಗೆ ನೇರ ನೇಮಕಾತಿ: ಸಾಧಕ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿBIG BREAKING: ಕೊನೆಗೂ ರಾಜ್ಯದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್ | ZP, TP Electionಸಾಗರ, ಹೊಸನಗರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ: ಸಚಿವ ಮಧು ಬಂಗಾರಪ್ಪಗೆ ರಾಜ್ಯ ರೈತ ಸಂಘ ಮನವಿGOOD NEWS: ಮೈಸೂರು ದಸರಾ ಹಬ್ಬದ ಪ್ರಯುಕ್ತ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರಮಕ್ಕಳ ರಕ್ಷಣಾ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ: ಶಿವಮೊಗ್ಗಕ್ಕೆ ಆಯೋಗದ ಸದಸ್ಯರ ಭೇಟಿಬೆಂಗಳೂರು – ಬೆಳಗಾವಿ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲುಅಲ್ಪಸಂಖ್ಯಾತ ಮತದಾರರ ಹೆಸರು ಡಿಲೀಟ್‌ಗೆ ಯತ್ನ?: ಪೊಲೀಸ್ ಕಮಿಷನರ್‌ಗೆ MLC ರಮೇಶ್ ಬಾಬು ದೂರುರೈತರ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ: ಕೇಂದ್ರದ ಬರ ಅಧ್ಯಯನ ತಂಡಕ್ಕೆ ಬಿಜೆಪಿ ಮನವಿ