ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಿರುವ ‘ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ’ಯ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ನಾಳೆ ನಡೆಯಲಿದೆ. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂಬುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ತಿಳಿಸಿದೆ.
ನಾಳೆ ಸಂಜೆ 4:00 ಗಂಟೆಗೆ ನಡೆಯಲಿರುವ ಈ ಮಹತ್ವದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತುಮರಿ, ಸಾಗರದ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಧಿಕಾರಿಗಳ ಉಪಸ್ಥಿತಿ ಹಾಗೂ ಕಾರ್ಯಕ್ರಮ ವಿವರ
ಈ ಕಾರ್ಯಕ್ರಮದಲ್ಲಿ ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ಡಾ. ಪ್ರತಿಭಾ, ಸಾಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ್ ಬಡಿಗೇರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಎಸ್.ಆರ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ, ತುಮರಿ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಭೂಮೇಶ್, ತುಮರಿ ಗ್ರಾಮ ಪಂಚಾಯ್ತಿ ಪಿಡಿಓ ಭೋಗ್ ರಾಜ್ ಹಾಗೂ ತುಮರಿಯ ಗಣ್ಯರು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಶಿಲಾನ್ಯಾಸ, ಪ್ರಾರ್ಥನೆ, ನಾಡಗೀತೆ, ರೈತ ಗೀತೆ, ಸಂವಿಧಾನ ಪೀಠಿಕೆ ಬೋಧನೆ, ಪ್ರಾಸ್ತಾವಿಕ ನುಡಿ ಹಾಗೂ ಗಣ್ಯರ ಭಾಷಣಗಳು ಜರುಗಲಿವೆ.
ಈ ಸಮಾರಂಭಕ್ಕೆ ತಾಲೂಕಿನ ಸಾರ್ವಜನಿಕರು, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು