ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಲಘುವಾಗಿ ಹೇಳಿಕೆಗಳನ್ನು ನೀಡುತ್ತಿರುವ ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಹರಿಹಾಯ್ದಿರುವ ಜೆಡಿಎಸ್ ಪಕ್ಷದ ದಲಿತ ಸಮುದಾಯದ ಶಾಸಕರು; ಮೈಸೂರಿನಲ್ಲಿ ದಲಿತ ಮಂತ್ರಿಗಳಿಗೆ ಅವಮಾನ ಆಗಿರುವ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಅಶ್ವಿನ್ ಕುಮಾರ್, ನಿಸರ್ಗ ನಾರಾಯಣಸ್ವಾಮಿ, ಡಾ. ಶ್ರೀನಿವಾಸಮೂರ್ತಿ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಅವರುಗಳು ಮೈಸೂರಿನಲ್ಲಿ ಸಚಿವರ ವಿಚಾರಕ್ಕೆ ಸಂಬಂಧಿಸಿದಂತೆ ಶಿಷ್ಟಾಚಾರ ಮತ್ತು ಭದ್ರತೆಯ ಲೋಪವಾಗಿದೆ. ಪೊಲೀಸರು ಮೂವರು ದಲಿತ ಮಂತ್ರಿಗಳಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಇದರ ನೈತಿಕ ಹೊಣೆ ಗೃಹ ಸಚಿವರದ್ದೆ ಆಗಿರುತ್ತದೆ ಎಂದು ಹೇಳಿದರು.
ದೇಶಾದ್ಯಂತ ರಾಹುಲ್ ಗಾಂಧಿಯವರು ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ನಾವು ಜಾತ್ಯತೀತರು, ಸಮ ಸಮಾಜ ತತ್ವದಲ್ಲಿ ನಂಬಿಕೆ ಉಳ್ಳವರು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಅವರದೇ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಮೈಸೂರಿನ ದಸರಾ ಮತ್ತು ಜಂಬೂಸವಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ದಲಿತ ಮಂತ್ರಿಗಳಾದ ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ ಮತ್ತು ಬಸಂತಪ್ಪ ಅವರಿಗೆ ಅವಮಾನ ಮಾಡಲಾಗಿದೆ ಎಂದು ನಾಲ್ವರು ಮಾಜಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಮಾತನಾಡಿದ ಟೀ ನರಸೀಪುರದ ಮಾಜಿ ಶಾಸಕ ಅಶ್ವಿನ್ ಕುಮಾರ್ ಅವರು; ಮುಖ್ಯಮಂತ್ರಿ ಡಿಕೆಶಿ ಆದೇಶದ ಮೇರೆಗೆ ಪೊಲೀಸರು ಹೀಗೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗಳು ದಲಿತ ಮಂತ್ರಿಗಳನ್ನು ಅಡ್ಡಗಟ್ಟಿದಾಗ ಮುಂದೆ ಹೋಗುತ್ತಿದ್ದ ಮುಖ್ಯಮಂತ್ರಿಗಳು ತಡೆಯಬೇಕಿತ್ತು. ಆದರೆ ಅವರು ಅದನ್ನು ಮಾಡದೆ ಮುಂದಕ್ಕೆ ಹೋಗಿದ್ದು ನಮಗೆ ತೀವ್ರ ನೋವು ಉಂಟು ಮಾಡಿದೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಈ ಘಟನೆಯ ಬಗ್ಗೆ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದು ಅಶ್ವಿನ್ ಕುಮಾರ್ ಅವರು ಒತ್ತಾಯ ಮಾಡಿದರು.
ಸ್ಟಿಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅನ್ನದಾನಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವ ಬಗ್ಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯದ ಪರಿಶಿಷ್ಟ ಜಾತಿ ಪ್ರವರ್ಗದ ರಾಜ್ಯಾಧ್ಯಕ್ಷ ಡಾ.ರ್ ಕೆ. ಅನ್ನದಾನಿ ಅವರು ಮಾತನಾಡಿ; ಸ್ಟಿಂಗ್ ಎನ್ನುವುದು ರಾಜ್ಯಕ್ಕೆ ಕಪ್ಪುಚುಕ್ಕಿಯಾಗಿ ಪರಿಣಮಿಸಿದೆ. ಅದೇ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ದೂರಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ಎಲ್ಲಾ ಕಡೆ ಸುದ್ದಿಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಕೂಡಾ ಗಮನಿಸುತ್ತಾ ಇದ್ದೇವೆ. ಎಲೆಕ್ಟ್ರಾನಿಕ್ ಮಾದ್ಯಮದ ಗೆಳೆಯನೊಬ್ಬ ನಾನೇ ಸ್ಟಿಂಗ್ ಮಾಡಿದ್ದು ಈ ಎಂದು ಹೇಳಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಏನು ಮಾಡ್ತಿದಾರೆ? ಸಣ್ಣ ಕೇಸ್ ಗಳಿಗೆ ಸುಮೊಟೋ ಕೇಸ್ ಹಾಕ್ತಿರಾ. ಪವರ್ ಟಿವಿ ರಾಕೇಶ್ ಶೆಟ್ಟಿ ಮೇಲೆ ಏಕೆ ಸುಮೊಟೋ ಕೇಸ್ ಹಾಕಿಲ್ಲ? ಇದನ್ನೆಲ್ಲ ನೋಡಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏನು ಮಾಡುತ್ತಿದ್ದಾರೆ? ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಅವರ ವಿರುದ್ಧವೇ ಅವರದೇ ಪಕ್ಷದ ನಾಯಕರು ಕುಟುಕು ಕಾರ್ಯಚರಣೆ ಮಾಡಿಸುತ್ತಿರುವುದು ಅವರಿಗೆ ತಿಳಿದಿಲ್ಲವೆಂದರೆ ಹೇಗೆ? ಎಂದು ಅನ್ನದಾನಿ ಪ್ರಶ್ನಿಸಿದರು.
ಕೆಪಿಎಸ್ಸಿ ಹಗರಣದ ಬಗ್ಗೆ ನಮ್ಮ ನಾಯಕರ ಕುಮಾರಸ್ವಾಮಿ ಅವರು ಅನೇಕ ದಾಖಲೆ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಅದಕ್ಕೆ ಇಲ್ಲಿವರೆಗೆ ಯಾಕೆ ಉತ್ತರ ಕೊಡಲಿಲ್ಲ. ಪ್ರತಿಯೊಂದಕ್ಕೂ ಅವರು ವಿಷಯಾಂತರ ಮಾಡಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಅವರೇ,.ನಿಮ್ಮ ತಂದೆಯವರ ಹೆಸರಿನಲ್ಲಿ ಎರಡು ಸಲ ಮಂತ್ರಿ ಆಗಿದ್ದೀರಿ. ದಲಿತ ಸಮುದಾಯದ ಖೋಟಾದಲ್ಲಿ ಮುಂದೆ ಬಂದಿದ್ದೀರಿ..ಕೆಪಿಎಸ್ಸಿ ಹಗರಣದ ಬಗ್ಗೆ ಕುಮಾರಸ್ವಾಮಿ ಹೇಳಿರುವ ದಾಖಲೆಗಳಿಗೆ ಉತ್ತರ ಕೊಡಿ..ನೀವು ಸೂಟು ಬೂಟು ಹಾಕಿಕೊಳ್ಳಿ, ಇಂಗ್ಲೀಷ್ ಮಾತನಾಡಿ ಪರವಾಗಿಲ್ಲ..ಆದರೆ ಕೊಟ್ಟಿರುವ ದಾಖಲೆಗಳಿಗೆ ಉತ್ತರ ಕೊಡಿ ಎಂದು.ಅನ್ನದಾನಿ ಒತ್ತಾಯಿಸಿದರು.
ನೀವು.ಯಾವತ್ತಾದರೂ ದಲಿತರ ಕಷ್ಟ ವಿಚಾರಿಸಿದ್ದೀರಾ? ಕುಮಾರಸ್ವಾಮಿ ಅವರು ಸಿಎಂ ಆದ ಒಂದು ವಾರದಲ್ಲೇ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದರು..ಅವರ ಕಷ್ಟಗಳನ್ನು ಅರಿಯುವ ಪ್ರಯತ್ನ ಮಾಡಿದ್ದರು. ಈ ವಿಷಯದಲ್ಲಿ ನೀವೇನು ಮಾಡಿದ್ದೀರಿ? ಯಾವ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದೀರಿ? ಯಾರನ್ನು ಉದ್ಧಾರ ಮಾಡಿದ್ದೀರಿ? ಇಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ನೀವು ಎಷ್ಟು ವರ್ಷಗಳಿಂದ ಅಧಿಕಾರ ಅನುಭವಿಸಿದ್ದೀರಿ? ಇನ್ನೊಬ್ಬ ದಲಿತನಿಗೆ ಸಚಿವ ಸ್ಥಾನ ಬಿಟ್ಟುಕೊಡಬಹುದಿತ್ತು. ಯಾಕೆ ಕೊಡಲಿಲ್ಲ, ಇಂಥ ಪ್ರವೃತ್ತಿಯ ನೀವು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ನಾಲಿಗೆ ಜಾರುತ್ತೀರಿ! ಗಂಗಾ ಕಲ್ಯಾಣ, ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ನಲ್ಲಿ ಮೀಸಲಾತಿ ಎಲ್ಲಾ ತಂದಿದ್ದು ದೇವೇಗೌಡರು. ಹಾಸನದಲ್ಲಿ ದಲಿತ ಯುವಕನನ್ನು ಜಿಪಂ ಅಧ್ಯಕ್ಷನನ್ನು ಮಾಡಿದ್ದು ದೇವೇಗೌಡರು. ನಾನು, ನಿಸರ್ಗ ನಾರಾಯಣಸ್ವಾಮಿ, ಅಶ್ವಿನ್ ಕುಮಾರ್, ಡಾ. ಶ್ರೀನಿವಾಸ್ ಮೂರ್ತಿ ಇರದಂತೆ ಅನೇಕ ದಲಿತ ಮುಖಂಡರನ್ನು ಶಾಸಕರನ್ನಾಗಿ ಮಾಡಿ ವಿಧಾನಸೌಧಕ್ಕೆ ಕರೆದುಕೊಂಡು ಹೋದವರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು. ನಿಮಗೆ ಇಂತಹ ದಾಖಲೆ ಅಥವಾ ಹೆಗ್ಗಳಿಕೆ ಇದೆಯೇ ಎಂದು ಮಾಜಿ ಶಾಸಕ ಅನ್ನದಾನಿ ಯವರು ತಾರಾಟಿಗೆ ತೆಗೆದುಕೊಂಡರು.
ಸಿದ್ದಾರ್ಥ ವಿಹಾರ್ ಟ್ರಸ್ಟ್ ಹಗರಣದಲ್ಲಿ ಭೂಮಿ ವಾಪಸ್ ಕೊಡುತ್ತೇನೆ ಎಂದು ನೀವು ಒಪ್ಪಿಕೊಂಡಿದ್ದನ್ನು ಮರೆತಿದ್ದೀರಾ? ವಾಪಾಸ್ ಕೊಡುತ್ತೇವೆ ಎಂದರೆ ತಪ್ಪು ಮಾಡಿದ್ದೇವೆ ಎಂದು ಅರ್ಥವಲ್ಲವೇ? ಯಾವ ನೈತಿಕತೆ ಇಟ್ಟುಕೊಂಡು ನೀವು ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡುತ್ತಿದ್ದೀರಿ ಎಂದು ಅನ್ನದಾನಿ ಕೇಳಿದರು.
ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಮುಗಿಸಲು ಈ ಸ್ಟಿಂಗ್ ಮಾಡಲಾಗಿದೆ. ಅಹಿಂದ ರಾಮಯ್ಯ ಎಂದೇ ಹೆಸರಾಗಿರುವ ಅವರ ವರ್ಚಸ್ಸು ಹಾಳು ಮಾಡಲು ಈ ಕುತಂತ್ರವನ್ನು ಮಾಡಲಾಗಿದೆ. ಜೆಡಿಎಸ್ ಪಕ್ಷದಲ್ಲಿ ಹಣಕಾಸು ಸಚಿವರಾಗಿ, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಪಕ್ಷ ನಾಯಕರಾಗಿ, ಎರಡು ಅವಧಿಗೆ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದ, ದಿವಂಗತ ದೇವರಾಜ ಅರಸು ಅವರಿಗಿಂತ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ರಾಕೇಶ್ ಶೆಟ್ಟಿ ಎಂಬ ಕ್ರಿಮಿಯನ್ನು ಚೂ ಬಿಡಲಾಗಿದೆ. ಈ ವ್ಯಕ್ತಿಯ ಹಿಂದೆ ಯಾರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಅನ್ನದಾನಿ ಹೇಳಿದರು.
ಈ ಸರ್ಕಾರಕ್ಕೆ ಸ್ಟಿಂಗ್ ಮಾಡಿದ ಆರೋಪಿಯನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ. ಬಹುಶಃ ಸರ್ಕಾರವೇ ಸ್ಟಿಂಗ್ ಗೆ ಒಳಗಾಗಿರಬೇಕು. ಅದಕ್ಕೆ ಗೃಹ ಸಚಿವರು ಸುಮ್ಮನೆ ಇದ್ದಾರೆ ಎನಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಗೌರವ ಇರಲಿಲ್ಲ. ಅವರ ವಿರುದ್ಧ ನೆಹರು ಅನೇಕ ಕುತಂತ್ರಗಳನ್ನು ಮಾಡಿದರು. ಮುಂಬೈನಲ್ಲಿ ಅವರನ್ನು ಸೋಲಿಸಲು ನೆಹರು ಅನೇಕ ಬಾರಿ ಪ್ರಯತ್ನ ಮಾಡಿದರು. ನಾಲ್ಕು ಚುನಾವಣೆಗಳಲ್ಲಿ ಅವರನ್ನು ಸೋಲಿಸಲಾಯಿತು. ಇಂತಹ ಕಾಂಗ್ರೆಸ್ ಪಕ್ಷಕ್ಕೆ ಬಾಬಾ ಸಾಹೇಬರು ಬರೆದಿರುವ ಸಂವಿಧಾನದ ಮೇಲೆ ಗೌರವ ಬರಲು ಸಾಧ್ಯವೇ? ದಲಿತರೆಂದರೆ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಮತ ಬ್ಯಾಂಕ್ ಆಗಿ ಪರಿಣಮಿಸಿದೆ ಎಂದು ಅವರು ಕಿಡಿಕಾರಿದರು.
ದೇವನಹಳ್ಳಿಯ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಮಾತನಾಡಿ; ಪ್ರಿಯಾಂಕ್ ಖರ್ಗೆ ಅವರು ದಲಿತ ಪ್ಲೇ ಕಾರ್ಡ್ ಹಾಕುವುದನ್ನು ನಿಲ್ಲಿಸಬೇಕು. ನಾನು ಎಂದು ಅವರು ಹೇಳಿಕೊಳ್ಳಬಾರದು. ಎಲ್ಲದಕ್ಕೂ ದಲಿತ ಸಮಾಜವನ್ನು ಬಳಲಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಮೂರು ಜನ ಅಧಿಕಾರದಲ್ಲಿದ್ದಿರಿ? ದಲಿತ ಸಮುದಾಯದವರಿಗೆ ಯಾಕೆ ಅವಕಾಶ ಕೊಡಲಿಲ್ಲಾ? ಎಂದು ಅವರು ಕೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರೇ, ನೀವು ಎಐಸಿಸಿ ಅಧ್ಯಕ್ಷರಾಗಿದ್ದಿರಾ ಎರಡು ಸರಿ ರಾಜ್ಯದಲ್ಲಿ ಮಂತ್ರಿಯಾಗಿದ್ದಿರಾ. ಆನೇಕಲ್ ಶಿವಣ್ಣ, ಬಂಗಾರಪೇಟೆ ನಾರಾಯಣಸ್ವಾಮಿ ಅವರು ದಲಿತರಲ್ಲವೇ? ಅವರನ್ನ ಯಾಕೆ ಸಚಿವರನ್ನಾಗಿ ಮಾಡಲಿಲ್ಲಾ? ದಲಿತರನ್ನು ಹತ್ತಿಕ್ಕುವ ಕೆಲಸವನ್ನು ನೀವೇ ಮಾಡುತ್ತಿದ್ದೀರಿ. ನಿಮ್ಮ ಮಗನನ್ನು ಉದ್ಧಾರ ಮಾಡುವ ಭರದಲ್ಲಿ ಸಮಾಜದ ಬೇರೆ ನಾಯಕರನ್ನು ತುಳಿಯುತ್ತಿದ್ದೀರಿ. ಇದು ನ್ಯಾಯವೇ? ಎಂದು ನಿಸರ್ಗ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪುಲಕೇಶಿ ನಗರದ ಮಾಜಿ ಶಾಸಕರಾದ ಅಖಂಡ ಶ್ರೀನಿವಾಸ್ ಮೂರ್ತಿ, ನೆಲಮಂಗಲದ ಮಾಜಿ ಶಾಸಕ ಡಾ. ಶ್ರೀನಿವಾಸ್ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.