ಬೆಂಗಳೂರು: ಮೈಸೂರು ದಸರಾ ಮತ್ತು ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ರಾಜ್ಯದ ಮೂವರು ದಲಿತ ಮಂತ್ರಿಗಳಿಗೆ ಅಪಮಾನ ಮಾಡಿರುವ ಘಟನೆಯನ್ನು ಜೆಡಿಎಸ್ ಖಂಡಿಸಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಕಟುವಾದ ಪೋಸ್ಟ್ ಮಾಡಿರುವ ಜೆಡಿಎಸ್; ಇದೇ ನೋಡಿ ಕಾಂಗ್ರೆಸ್’ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜ ಮರ್ಯಾದೆ ಎಂದು ಕಾಲೆಳೆದಿದೆ.
ದಲಿತರನ್ನು ಕೇವಲ ಮತಬ್ಯಾಂಕ್‌ಗೆ ಮಾತ್ರ ಬಳಸಿಕೊಂಡು, ಅಧಿಕಾರ ಬಂದಾಗ ಅಪಮಾನಿಸುವುದೇ ಕಾಂಗ್ರೆಸ್ ಸಂಸ್ಕೃತಿ! ಮೈಸೂರು ದಸರಾ ಜಂಬೂಸವಾರಿ ವೇದಿಕೆಗೆ ತೆರಳುತ್ತಿದ್ದ ವೇಳೆ ದಲಿತ ಮಂತ್ರಿಗಳನ್ನು ತಡೆದು ಅಪಮಾನಿಸಿರುವುದು ಖಂಡನೀಯ ಎಂದು ಪಕ್ಷ ಹೇಳಿದ್ದು, ಸಿಎಂ ಡಿಕೆಶಿ ಅವರೇ, ನಿಮ್ಮ ಜೊತೆಯಲ್ಲೇ ಬಂದ ಸಂಪುಟದ ಸಹೋದ್ಯೋಗಿಗಳನ್ನು ವೇದಿಕೆಗೆ ಕರೆದೊಯ್ಯದೆ ಹಾಗೆಯೇ ಬಿಟ್ಟು ಹೋದದ್ದು ಯಾಕೆ? ಸ್ವತಃ ಸಚಿವರಿಗೇ ಈ ದುಸ್ಥಿತಿಯಾದರೆ ಇನ್ನು ನಿಮ್ಮ ಆಡಳಿತದಲ್ಲಿ ಸಾಮಾನ್ಯರ ಗತಿಯೇನು? ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ನಿಮ್ಮ ಅಂಬೇಡ್ಕರ್ ವಾದ? ಇದೇನಾ ಅವರು ಬರೆದ ಸಂವಿಧಾನದ ಮೇಲಿರುವ ನಂಬಿಕೆ? ನಾಚಿಕೆಯಾಗಬೇಕು ನಿಮಗೆ? ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!! ಇಂಥ ದ್ವಂದ್ವದಿಂದ ಕರ್ನಾಟಕಕ್ಕೆ ಕಳಂಕ ತಂದಿದ್ದೀರಿ ನೀವು..ಅಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿ, ಅಪಮಾನಿಸಿ, ಚುನಾವಣಾ ಕಣದಲ್ಲಿ ನಾಲ್ಕು ಬಾರಿ ಸೋಲಿಸಿ, ಚುನಾವಣಾ ಕಣದಿಂದಲೇ ಹತ್ತಿಕ್ಕಿ ದಲಿತಜ್ಯೋತಿಯನ್ನು ನಂದಿಸಿದ ಕಾಂಗ್ರೆಸ್, ಮುಕ್ಕಾಲು ಶತಮಾನದ ನಂತರವೂ ಅದನ್ನು ನಿಷ್ಠೆಯಿಂದ ಪಾಲಿಸುತ್ತಿದೆ. ಶ್ರೀ ಚಾಮುಂಡೇಶ್ವರಿ ಅಮ್ಮನ ಮೆರವಣಿಗೆಯಲ್ಲಿ ದಲಿತ ದ್ವೇಷವನ್ನು ಆಚರಿಸಿದ್ದು ಸಾಕ್ಷಾತ್ ಆ ತಾಯಿಯೇ ನಿಮ್ಮನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದ್ದೀರಿ, ಮುಂದೆ ಅನುಭವಿಸುತ್ತೀರಿ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ನಮ್ಮ ಒತ್ತಾಯ ಇಷ್ಟೇ, ಸಂಪುಟದಲ್ಲಿರುವ ಎಲ್ಲಾ ದಲಿತ ಸಚಿವರು ಮುಖ್ಯಮಂತ್ರಿ ಹಾಗೂ ಅವರ ಅಧಿಕಾರಿಗಳು ವರ್ತಿಸಿದ ರೀತಿಯನ್ನು ಖಂಡಿಸಬೇಕು. ಅಷ್ಟೇ ಅಲ್ಲ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದ ಇಂತಹ ವ್ಯಕ್ತಿ ಕೈಕೆಳಗೆ ಕೆಲಸ ಮಾಡುವುದೇ ಅಪಮಾನ. ನೀವೆಲ್ಲರೂ ರಾಜೀನಾಮೆ ಬಿಸಾಡಿ ಹೊರಬರುತ್ತೀರೋ ಅಥವಾ ನಿಮ್ಮ ಗೌರವವನ್ನು ಬದಿಗಿಟ್ಟು ಮುಂದುವರಿಯುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದು ಎಂದು ಅಪಮಾನಿತ ಸಚಿವರಿಗೆ ಕಿವಿಮಾತು ಹೇಳಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಾಡಹಬ್ಬ ದಸರಾ ವೇಳೆ ನಿಮ್ಮ ಇಲಾಖೆಯ ಅಧಿಕಾರಿಗಳು ತೋರಿದ ಈ ದುವರ್ತನೆ ಬಗ್ಗೆ ಬಾಯಿಬಿಡಿ. ಬೇಡವಾದದ್ದಕ್ಕೆಲ್ಲಾ ಕಿರುಚಾಡುವ ನೀವು ಈ ಬಗ್ಗೆ ಮಾತನಾಡಿ ಎಂದು ಜೆಡಿಎಸ್ ಒತ್ತಾಯ ಮಾಡಿದೆ.