ಮಂಡ್ಯ : ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲೂಕು, ಜಿಲ್ಲಾ ಮಟ್ಟದ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾಸೇವೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಶನಿವಾರ ಹೇಳಿದರು.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಪ್ರಜಾ ಸೇವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಯಾವುದೇ ಇಲಾಖೆಯ ಸಮಸ್ಯೆಗಳನ್ನು ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಸವಲತ್ತು ಮತ್ತು ಸಮಸ್ಯೆಗಳ ಬಗ್ಗೆ ದೂರು ದಾಖಲಿಸಿದರೆ, ಸಂಬಂಧಪಟ್ಟ ಇಲಾಖೆಗೆ ಅರ್ಜಿಗಳನ್ನು ವರ್ಗಾಯಿಸಿ ನಿಮಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಲಾಗುವುದು ಎಂದರು.
ಈ ಪ್ರಜಾಸೇವೆ ಕಾರ್ಯಕ್ರಮ ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಪ್ರತಿ ಶನಿವಾರದಂದು ಹೋಬಳಿ ಮಟ್ಟ ಮುಗಿದ ಬಳಿಕ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಜನರ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ನಿಡಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್ ಮಾತನಾಡಿ, ಆತಗೂರು ಗ್ರಾಮದಲ್ಲಿ ಹೋಬಳಿ ಮಟ್ಟದಲ್ಲಿ ನಡೆದ ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ನಿಡಘಟ್ಟ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಕಲ್ಪಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನಾವು ನೀಡಿದ ಅರ್ಜಿಯ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ನೀವು ಯಾವ ಅರ್ಜಿ ನೀಡಿದ್ದಿರಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ತಹಶೀಲ್ದಾರ್ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನಿಡಘಟ್ಟ ಗ್ರಾಮದಲ್ಲಿ ಎಲ್ಲಾ ಜನಾಂಗದವರು ಸೌಹಾರ್ದಯುತ ಜೀವನ ನಡೆಸುತ್ತಿದ್ದಾರೆ. ಒಂದೊಂದು ಜನಾಂಗಕ್ಕೂ ಸ್ಮಶಾನ ಭೂಮಿ ಕಲ್ಪಿಸಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಜನಾಂಗವಿದೆ. ಆದರೆ, ನಮಗೆ ಸ್ಮಶಾನ ಭೂಮಿ ಇಲ್ಲದೆ ಎಲ್ಲೆಂದರಲ್ಲಿ ಅಂತ್ಯಕ್ರಿಯೆ ಮಾಡುವಂತ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶೀಘ್ರವಾಗಿ ತಾಲೂಕು ಆಡಳಿತ ಸಾರ್ವಜನಿಕ ಸ್ಮಶಾನ ಭೂಮಿ ಕಲ್ಪಿಸಬೇಕು ಮತ್ತು ಅಭಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮತ್ತೆ ಮುಜರಾಯಿ ಇಲಾಖೆಗೆ ಒಳಪಡಿಸಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಗುರುತು ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ 81 ಅರ್ಜಿಗಳು ಸಲ್ಲಿಕೆಯಾದವು. ಪಿಂಚಣಿ ಪ್ರಮಾಣ ಪತ್ರ, ಪಶು ಇಲಾಖೆ ವತಿಯಿಂದ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.
ಇದೇ ವೇಳೆ ತಾಪಂ ಇಓ ರಾಮಲಿಂಗಯ್ಯ, ಟಿಎಚ್ಓ ಡಾ.ರವಿಶಂಕರ್, ಬಿಇಓ ಧನಂಜಯ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ್, ಸಿಡಿಪಿಓ ಅರುಣ್ ಕುಮಾರ್, ಎಡಿಎಲ್ಆರ್ ಲಿಖಿತಾ, ಶಿರಸ್ತೇದಾರ್ ರಾಘವೇಂದ್ರ, ರಾಜಸ್ವ ನಿರೀಕ್ಷಕ ಮುರುಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ