ಬೆಂಗಳೂರು: ರೈತರ ಜಮೀನುಗಳಿಗೆ ಹೊಂದಿಕೊಂಡಿರುವ ರಸ್ತೆಬದಿಯ ಸರ್ಕಾರಿ ಜಮೀನುಗಳಲ್ಲಿ ರೈತರ ಸಹಭಾಗಿತ್ವದೊಂದಿಗೆ ತೇಗ ಹಾಗೂ ಇತರೆ ಆರ್ಥಿಕ ಮೌಲ್ಯದ ಮರಗಳನ್ನು ಬೆಳೆಸುವ ಮಹತ್ವಾಕಾಂಕ್ಷೆಯ "ತೇಗ ಸಿರಿ" ರಾಜ್ಯಮಟ್ಟದ ಸಮಗ್ರ ವೃಕ್ಷಾಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಒಟ್ಟು ರೂ. 450 ಕೋಟಿ ವೆಚ್ಚದಲ್ಲಿ 2026-27ರಿಂದ 2028-29ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದಕ್ಕಾಗಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ರೈತರಿಗೆ ಶೇಕಡಾ 70ರಷ್ಟು ಲಾಭದ ಪಾಲು
ಈ ಯೋಜನೆಯಡಿ ರಸ್ತೆಬದಿಯಲ್ಲಿ ಬೆಳೆಸುವ ಮರಗಳ ಉತ್ಪನ್ನ ಅಥವಾ ಲಾಭದಲ್ಲಿ ಶೇ. 70 ರಷ್ಟು ಪಾಲನ್ನು ಫಲಾನುಭವಿ ರೈತರಿಗೆ ನೀಡಲಾಗುತ್ತದೆ. ಅರ್ಹ ರೈತರಿಗೆ ಅಧಿಕೃತವಾಗಿ ಭಾವಚಿತ್ರ ಸಹಿತ ‘ಟ್ರೀ-ಪಟ್ಟಾ / ಮರಪಟ್ಟಾ’ (Passbook) ವಿತರಿಸಲಾಗುತ್ತದೆ. ರಸ್ತೆಬದಿಯುದ್ದಕ್ಕೂ ಜಮೀನು ಹೊಂದಿರುವ ರೈತರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಉದ್ಯೋಗ ಖಾತ್ರಿ (ವಿಬಿ ಜಿ-ರಾಮ್-ಜಿ) ಯೋಜನೆ ಸಮನ್ವಯ
ನೆಡುತೋಪಿಗಾಗಿ ಗುಂಡಿ ತೋಡುವುದು, ನೆಡುವುದು, ಗೂಟ ನೆಡುವುದು, ಮಣ್ಣು ಕೆಲಸ, ಕಳೆ ತೆಗೆಯುವುದು, ಗೊಬ್ಬರ ಹಾಕುವುದು ಹಾಗೂ ಬೆಂಕಿ ರೇಖೆ ನಿರ್ಮಾಣದಂತಹ ಕೂಲಿ ಆಧಾರಿತ ಕಾಮಗಾರಿಗಳನ್ನು ‘ವಿಕಸಿತ ಭಾರತ - ಉದ್ಯೋಗ ಮತ್ತು ಜೀವನೋಪಾಯ ಖಾತ್ರಿ ಮಿಷನ್ (ಗ್ರಾಮೀಣ) - ವಿಬಿ ಜಿ-ರಾಮ್-ಜಿ’ ಯೋಜನೆಯಡಿ ಕೈಗೊಳ್ಳಲಾಗುತ್ತದೆ. ಅರಣ್ಯ ಇಲಾಖೆಯ ತಾಂತ್ರಿಕ ಮೇಲ್ವಿಚಾರಣೆಯಲ್ಲಿ ಗ್ರಾಮ ಪಂಚಾಯತ್ ಈ ಕಾಮಗಾರಿಗಳನ್ನು ನಿರ್ವಹಿಸಲಿದೆ.
ಯಾವೆಲ್ಲಾ ಮರಗಳನ್ನು ಬೆಳೆಸಬಹುದು?
ಅರಣ್ಯ ಇಲಾಖೆಯು ತೇಗ, ಬೀಟೆ, ಹೊನ್ನೆ, ಶಿವಣೆ, ಮಹಾಗನಿ, ಹೆಬ್ಬೇವು, ಹಲಸು, ಮಾವು, ಹಾಲೆ, ಬೇವು, ಕಿರಾಲ್ ಬೋಗಿ ಮೊದಲಾದ ಆರ್ಥಿಕ ಮೌಲ್ಯದ ಗುಣಮಟ್ಟದ ಸಸಿಗಳನ್ನು ಬೆಳೆಸಿ ಗ್ರಾಮ ಪಂಚಾಯತ್‌ಗಳಿಗೆ ಸರಬರಾಜು ಮಾಡಲಿದೆ. ಆದರೆ, ಹುಣಸೆ ಹಾಗೂ ನೇರಳೆಯಂತಹ ನಿಧಾನವಾಗಿ ಬೆಳೆಯುವ ಮತ್ತು ಹಣ್ಣು ಬಿಡುವ ಜಾತಿಯ ಮರಗಳನ್ನು ನೆಡಲು ಅವಕಾಶವಿಲ್ಲ. ಕಲ್ಯಾಣ ಕರ್ನಾಟಕ ಸೇರಿದಂತೆ ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯವಿರುವ ಸ್ಥಳಗಳಲ್ಲಿ ಮಾತ್ರ ತೇಗ ಬೆಳೆಸಲು ಅನುಮತಿ ನೀಡಲಾಗಿದ್ದು, ಇತರೆಡೆ ಸ್ಥಳೀಯ ವಾತಾವರಣಕ್ಕೆ ಸೂಕ್ತವಾದ ಮರಗಳನ್ನು ಬೆಳೆಸಲು ಸೂಚಿಸಲಾಗಿದೆ.
ಅನುಷ್ಠಾನಕ್ಕಾಗಿ 3 ಹಂತದ ಸಮಿತಿಗಳ ರಚನೆ
ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರ 3 ಹಂತದ ಸಮಿತಿಗಳನ್ನು ರಚಿಸಿದೆ:
- ಜಿಲ್ಲಾಮಟ್ಟದ ಸಮಿತಿ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಪಂಚಾಯತ್ ಸಿಇಒ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಲೋಕೋಪಯೋಗಿ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿ ತಿಂಗಳಿಗೊಮ್ಮೆ ಸಭೆ ಸೇರಲಿದೆ.
- ತಾಲ್ಲೂಕು ಮಟ್ಟದ ಸಮಿತಿ: ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಅಧ್ಯಕ್ಷರಾಗಿ ಹಾಗೂ ತಹಶೀಲ್ದಾರ್ ಸಹ-ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಲಿದೆ.
- ಗ್ರಾಮ ಪಂಚಾಯತ್ ಮಟ್ಟದ ಸಮಿತಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಆಡಳಿತ ಅಧಿಕಾರಿ ಸಹ-ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ನೆಡುವ ಋತುವಿನಲ್ಲಿ ವಾರಕ್ಕೊಮ್ಮೆ ಸಭೆ ನಡೆಸಿ ರೈತರು ಹಾಗೂ ಸಸಿಗಳ ಗುರುತಿಸುವಿಕೆ ಕಾರ್ಯ ನಿರ್ವಹಿಸಲಿದೆ.
ಕೆಡಿಪಿ ಸಭೆಗಳಲ್ಲಿ ಪ್ರಗತಿ ಪರಿಶೀಲನೆ
ಜಿಲ್ಲಾಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಯೋಜನೆಯ ಪ್ರಚಾರ ಮತ್ತು ಜಾಗೃತಿಗಾಗಿ ಪ್ರತಿ ಅರಣ್ಯ ವಲಯಕ್ಕೆ ಗೌರವಧನದ ಆಧಾರದಲ್ಲಿ ‘ಸುಗಮಗಾರರನ್ನು’ (Facilitators) ನಿಯೋಜಿಸಲು ಆದೇಶದಲ್ಲಿ ತಿಳಿಸಲಾಗಿದೆ.