ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ನೌಕರರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗೆ ಮಹತ್ವದ ಹೆಜ್ಜೆಯಿಟ್ಟಿದ್ದು, ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ಮೊತ್ತವನ್ನು ಭರ್ಜರಿ ₹1 ಕೋಟಿಗೆ ಹೆಚ್ಚಿಸಿದೆ. ಈ ಮೂಲಕ ನೌಕರರಿಗೆ ಸಿಹಿಸುದ್ದಿ ನೀಡಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಈ ಪರಿಷ್ಕೃತ ಒಡಂಬಡಿಕೆ ಜಾರಿಗೆ ಬಂದಿದ್ದು, ಸಂಸ್ಥೆಯ ಸಾವಿರಾರು ಉದ್ಯೋಗಿಗಳಿಗೆ ಇದು ಆರ್ಥಿಕ ರಕ್ಷಣೆ ಒದಗಿಸಲಿದೆ.
ಮೂರು ವರ್ಷಗಳ ನೂತನ ಒಪ್ಪಂದಕ್ಕೆ ಸಹಿ
ಸಂಸ್ಥೆಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ 2023ರಲ್ಲಿ ಮಾಡಿಕೊಂಡಿದ್ದ ಮೂರು ವರ್ಷಗಳ ಒಡಂಬಡಿಕೆಯನ್ನು ಮುಂದುವರಿಸಿ, ನೂತನ ಒಪ್ಪಂದಕ್ಕೆ ಅಕ್ಟೋಬರ್ 8, 2026ರಂದು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಹಿಂದೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ನಾಮನಿರ್ದೇಶಿತರಿಗೆ ₹50 ಲಕ್ಷ ವಿಮಾ ಮೊತ್ತ ನೀಡಲಾಗುತ್ತಿತ್ತು. ಇನ್ಮುಂದೆ ಈ ಪರಿಹಾರ ದುಪ್ಪಟ್ಟಾಗಲಿದ್ದು, ₹1 ಕೋಟಿಗೆ ಏರಿಕೆಯಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ (ಭಾ.ಆ.ಸೇ.) ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಎಚ್.ಟಿ. ವಾಸಪ್ಪ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಅಹದ್ (ಭಾ.ಪೊ.ಸೇ.), ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ್, ಮುಖ್ಯ ಲೆಕ್ಕಾಧಿಕಾರಿ ಮಂಜುಶ್ರೀ ಆರ್. ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪಘಾತ ಮತ್ತು ನೈಸರ್ಗಿಕ ಸಾವಿಗೆ ಪರಿಹಾರ ಮೊತ್ತ
ಯೂನಿಯನ್ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿರುವ ಬಿಎಂಟಿಸಿ ಸಿಬ್ಬಂದಿ ಕರ್ತವ್ಯದ ವೇಳೆ ಅಥವಾ ವೈಯಕ್ತಿಕ ಅಪಘಾತಗಳಿಂದ ಮೃತಪಟ್ಟರೆ, ಅವರ ನಾಮನಿರ್ದೇಶಿತರಿಗೆ ಗರಿಷ್ಠ ₹1 ಕೋಟಿ ವಿಮಾ ಪರಿಹಾರ ಲಭ್ಯವಾಗಲಿದೆ. ಒಂದು ವೇಳೆ ನೌಕರರು ನೈಸರ್ಗಿಕ ಅಥವಾ ಇನ್ನಿತರೆ ಕಾರಣಗಳಿಂದ ಮೃತಪಟ್ಟಲ್ಲಿ, ಮಾಸಿಕ ವೇತನ ₹25,000/-ಕ್ಕಿಂತ ಕಡಿಮೆ ಇರುವವರ ಕುಟುಂಬಕ್ಕೆ ₹5 ಲಕ್ಷ ಹಾಗೂ ₹25,000/-ಕ್ಕಿಂತ ಹೆಚ್ಚು ವೇತನ ಪಡೆಯುವವರ ಕುಟುಂಬಕ್ಕೆ ₹10 ಲಕ್ಷ ಆರ್ಥಿಕ ನೆರವು ಸಿಗಲಿದೆ.
ಶಾಶ್ವತ ಅಂಗವಿಕಲತೆ ಹಾಗೂ ಮೆಡಿಕ್ಲೈಮ್ ನೆರವು
ದುರದೃಷ್ಟವಶಾತ್ ಸಿಬ್ಬಂದಿ ಶಾಶ್ವತ ಭಾಗಶಃ ಅಥವಾ ಶಾಶ್ವತ ಸಂಪೂರ್ಣ ಅಂಗವಿಕಲತೆಗೆ ಒಳಗಾದ ಸಂದರ್ಭದಲ್ಲೂ ಈ ಯೋಜನೆ ಗರಿಷ್ಠ ರಕ್ಷಣೆ ನೀಡಲಿದೆ. ಮಾಸಿಕ ₹25,000/-ಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ ₹1 ಕೋಟಿ ವಿಮೆ ಜತೆಗೆ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ₹4 ಲಕ್ಷ ಹೆಚ್ಚುವರಿ ಪರಿಹಾರ ದೊರೆಯಲಿದೆ. ಅದೇ ರೀತಿ ₹25,000/-ಕ್ಕಿಂತ ಹೆಚ್ಚು ವೇತನವಿರುವ ಸಿಬ್ಬಂದಿಗೆ ₹1 ಕೋಟಿ ವಿಮೆ ಜತೆಗೆ ರೂಪೇ ಕಾರ್ಡ್ ಮೂಲಕ ₹15 ಲಕ್ಷ ನೆರವು ಸಿಗಲಿದೆ. ಇದರೊಂದಿಗೆ, ನೌಕರರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ ವಾರ್ಷಿಕ ಗರಿಷ್ಠ ₹30,000/- ವರೆಗೆ ಮೆಡಿಕ್ಲೈಮ್ ನೆರವು ಕೂಡ ಒದಗಿಸಲಾಗುತ್ತದೆ.