ನವೆಂಬರ್ 5 ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿರುವ ‘ರಾಮಾಯಣ: ಪಾರ್ಟ್ 1’ ಸಿನಿಮಾದಲ್ಲಿ ಶೂರ್ಪಣಖಿ ಪಾತ್ರದಲ್ಲಿ ಅಭಿನಯಿಸಿರುವ ಪ್ರಸಿದ್ಧ ನಟಿ ರಕುಲ್ ಪ್ರೀತ್ ಸಿಂಗ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾದ ಬಿಹೈಂಡ್ ದಿ ಸಿನ್ಸ್ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಪೂರ್ವ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ನಮ್ಮ ತಲೆಮಾರುಗಳ ಜೀವನದ ಭಾಗವಾಗಿರುವ ಈ ಮಹಾಕಾವ್ಯದ ದೃಶ್ಯರೂಪದಲ್ಲಿ ನಟಿಸಿರುವುದು ತಮಗೆ ಅತ್ಯಂತ ವಿಶೇಷವಾದ ಅನುಭವ ನೀಡಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇಂತಹ ಬೃಹತ್ ಮಟ್ಟದಲ್ಲಿ ನಿರ್ಮಾಣವಾಗಿರುವ ಮಹಾಕಾವ್ಯದ ಭಾಗವಾಗಿರುವುದು ಭಾರತೀಯಳಾಗಿ ತಮಗೆ ಅಪಾರ ಹೆಮ್ಮೆ ತಂದಿದೆ ಎಂದಿರುವ ರಕುಲ್, ಶೂರ್ಪಣಖಿ ಪಾತ್ರಕ್ಕಾಗಿ ತಮಗೆ ಸಜ್ಜಾಗಲು ಪ್ರತಿದಿನ 4 ಗಂಟೆಗಳ ಕಾಲ ಮೇಕಪ್ ಹಿಡಿಯುತ್ತಿತ್ತು ಎಂಬ ಕುತೂಹಲಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಶ್ರಮಿಸಿದ ತಮ್ಮ ಮೇಕಪ್ ಹಾಗೂ ಹೇರ್ ಸ್ಟೈಲ್ ತಂಡಕ್ಕೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರ ಕಲ್ಪನೆ ಮತ್ತು ಶ್ರಮವನ್ನು ಶ್ಲಾಘಿಸಿರುವ ಅವರು, ಸಹನಟರಾದ ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ), ರಾಕಿಂಗ್ ಸ್ಟಾರ್ ಯಶ್ (ರಾವಣ), ರವಿ ದುಬೆ, ಕಾಜಲ್ ಅಗರ್ವಾಲ್ ಮತ್ತು ಶೋಭನಾ ಸೇರಿದಂತೆ ಸಂಪೂರ್ಣ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಎರಡು ಭಾಗಗಳ ಸರಣಿಯ ಮೊದಲ ಭಾಗ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಎರಡನೇ ಭಾಗವು 2028ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.