ಮುಂಬೈ: ಚಲಿಸುತ್ತಿದ ರೈಲಿನಲ್ಲಿ ಪ್ರಯಾಣಿಕರಿಬ್ಬರು ಬಾಗಿಲು ಬಳಿ ನಿಂತು ನಿಲ್ಲುವ ಜಾಗಕ್ಕಾಗಿ ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಓರ್ವ ರೈಲಿನಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ಮುಂಬೈ ಲೋಕಲ್ ರೈಲಿನಲ್ಲಿ ಸಾಮಾನ್ಯವಾಗಿ ಪ್ರಯಾಣಿಕರು ಕಿಕ್ಕಿರಿದು ತುಂಬಿರುತ್ತಾರೆ. ಇಂತಹ ಹೊತ್ತಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎದುರಾಗಬಹುದು. ಅದರಲ್ಲೂ ಚಲಿಸುವ ರೈಲಿನ ಬಾಗಿಲಿನ ಬಳಿ ನಿಂತು ಪ್ರಯಾಣಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿ.
ರೈಲಿನಲ್ಲಿ ನಿಲ್ಲುವ ಜಾಗದ ವಿಚಾರಕ್ಕೆ ಇಬ್ಬರು ಪ್ರಯಾಣಿಕರ ನಡುವೆ ಆರಂಭವಾದ ಜಗಳ ಒಬ್ಬರು ಚಲಿಸುವ ರೈಲಿನಿಂದ ಕೆಳಗೆ ಬೀಳುವ ಹಂತಕ್ಕೆ ತಲುಪಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವೆಂಬರ್ 6ರ ಶುಕ್ರವಾರ ರಾತ್ರಿ ಸುಮಾರು 10.30ರ ವೇಳೆಗೆ ಚರ್ಚ್‌ಗೇಟ್‌ನಿಂದ ವಿರಾರ್‌ಗೆ ತೆರಳುತ್ತಿದ್ದ ಫಾಸ್ಟ್ ಲೋಕಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ರೈಲು ಗ್ರಾಂಟ್ ರಸ್ತೆ ಮತ್ತು ಮುಂಬೈ ಸೆಂಟ್ರಲ್ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದಾಗ, ಬಾಗಿಲಿನ ಬಳಿ ನಿಲ್ಲುವ ಜಾಗದ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದ ಆರಂಭವಾಗಿದೆ.
ಆರಂಭದಲ್ಲಿ ಮಾತಿನ ಚಕಮಕಿಯಾಗಿದ್ದ ಜಗಳ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇಬ್ಬರೂ ಪರಸ್ಪರ ಹೊಡೆದಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಒಬ್ಬ ಪ್ರಯಾಣಿಕ ಹಿಂದಕ್ಕೆ ಸರಿಯುವಾಗ ಸಮತೋಲನ ಕಳೆದುಕೊಂಡು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದಿದ್ದಾರೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕ ಪಾರಾಗಿದ್ದಾರೆ. ಪ್ರಯಾಣಿಕ ಮುಂಬೈ ಸೆಂಟ್ರಲ್ ನಿಲ್ದಾಣದ ಸಮೀಪ ಹಳಿಗಳ ಮೇಲೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಆ ಸಮಯದಲ್ಲಿ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದ ಕಾರಣ ತುಲನಾತ್ಮಕವಾಗಿ ನಿಧಾನವಾಗಿ ಚಲಿಸುತ್ತಿತ್ತು. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಪ್ರಯಾಣಿಕರು ಬೀಳುವಿಕೆಯ ಬಳಿಕ ಬದುಕುಳಿದಿದ್ದಾರೆ ಎಂದು ವರದಿಗಳು ತಿಳಿಸಿವೆ.