ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು, 2018ರ ಕುಖ್ಯಾತ ಬಾಲ್ ಟ್ಯಾಂಪರಿಂಗ್ (ಸ್ಯಾಂಡ್‌ಪೇಪರ್‌ಗೇಟ್) ಹಗರಣದ ಕುರಿತು ಮಾಜಿ ಬ್ಯಾಟರ್ ಉಸ್ಮಾನ್ ಖಾವಾಜಾ ನೀಡಿರುವ ಹೊಸ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವಿವಾದದ ಬಗ್ಗೆ ತಾನು ಹೆಚ್ಚಿನ ಗಮನಹರಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಸ್ಟಾರ್ಕ್, 2021ರಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ನೀಡಿದ್ದ ಜಂಟಿ ಹೇಳಿಕೆಯೇ ಇಂದಿಗೂ ತನ್ನ ನಿಲುವು ಎಂದು ಸ್ಪಷ್ಟಪಡಿಸಿದ್ದಾರೆ.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ನಡೆದ ಈ ವಿವಾದವು ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಚೆಂಡಿನ ಸ್ವರೂಪ ಬದಲಿಸಲು ಸ್ಯಾಂಡ್‌ಪೇಪರ್ ಬಳಸಿದ್ದು ಸಾಬೀತಾದ ಬಳಿಕ ಆಗಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬಾಂಕ್ರಾಫ್ಟ್ ಮೇಲೆ ನಿಷೇಧ ಹೇರಲಾಗಿತ್ತು.
ಇತ್ತೀಚೆಗೆ ಬಿಡುಡೆಯಾಗಲಿರುವ ತಮ್ಮ ‘ಸಬ್ರ್’ ಆತ್ಮಕತೆಯ ಪ್ರಚಾರದ ವೇಳೆ ಮಾತನಾಡಿದ್ದ ಉಸ್ಮಾನ್ ಖಾವಾಜಾ, ಆ ಸರಣಿಯಲ್ಲಿ ಇಡೀ ಆಸ್ಟ್ರೇಲಿಯಾ ತಂಡ ಹಾಗೂ ಬೆಂಬಲ ಸಿಬ್ಬಂದಿಗೆ ಈ ಕೃತ್ಯದ ಬಗ್ಗೆ ಮೊದಲೇ ತಿಳಿದಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಕೇಪ್ ಟೌನ್ ಪಂದ್ಯಕ್ಕೂ ಮುನ್ನ ಪೋರ್ಟ್ ಎಲಿಜಬೆತ್ (ಜಿಕ್ವೆಬೆರ್ಹಾ) ಟೆಸ್ಟ್ ಪಂದ್ಯದಲ್ಲೂ ಸ್ಯಾಂಡ್‌ಪೇಪರ್ ಬಳಸಲಾಗಿತ್ತು ಎಂದು ಅವರು ಪುಸ್ತಕದಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಿಚೆಲ್ ಸ್ಟಾರ್ಕ್, “ಖಾವಾಜಾ ಅವರ ಹೇಳಿಕೆಯ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಎಂಟು ವರ್ಷಗಳ ಹಿಂದಿನ ಘಟನೆಯ ಕುರಿತು ಭಿನ್ನ ಅಭಿಪ್ರಾಯಗಳಿರಬಹುದು. ಆದರೆ 2021ರಲ್ಲಿ ಬೌಲರ್‌ಗಳಾದ ನಾವು ಏನು ಹೇಳಿದ್ದೆವೋ, ಇಂದಿಗೂ ನನ್ನ ಅಭಿಪ್ರಾಯ ಹಾಗೂ ನೆನಪು ಬದಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಪೋರ್ಟ್ ಎಲಿಜಬೆತ್ ಪಂದ್ಯದಲ್ಲಿ ಅಂತಹ ಯಾವುದೇ ಘಟನೆ ನಡೆದಿರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದು, ಮೈದಾನಕ್ಕೆ ಹೊರಗಿನ ವಸ್ತುಗಳನ್ನು ತಂದಿರುವ ಬಗ್ಗೆ ಬೌಲರ್‌ಗಳಿಗೆ ಯಾವುದೇ ಮುನ್ಸೂಚನೆ ಇರಲಿಲ್ಲ ಎಂಬ ತಮ್ಮ ಹಿಂದಿನ ಹೇಳಿಕೆಗೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದ್ದಾರೆ.