ಒಮನ್ ದೇಶದಲ್ಲಿ ನಡೆಯುತ್ತಿರುವ 2026ರ ಅಂಡರ್ 19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲಲು ಭಾರತ ಯುವ ತಂಡಕ್ಕೆ 338 ರನ್ ಗಳ ಬೃಹತ್ ಗುರಿ ಎದುರಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಅಂಡರ್ 19 ತಂಡವು ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿದೆ.
ಪಾಕಿಸ್ತಾನದ ಪರ ಆರಂಭಿಕ ಆಟಗಾರ ಉಸ್ಮಾನ್ ಖಾನ್ ಅಮೋಘ ಶತಕ ಸಿಡಿಸಿ 107 ರನ್ ಕಲೆಹಾಕುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅಬ್ದುಲ್ ಖಾದಿರ್ ಕೇವಲ 54 ಎಸೆತಗಳಲ್ಲಿ 80 ರನ್ ಸಿಡಿಸಿದರೆ, ನಾಯಕ ಫರ್ಹಾನ್ ಯೂಸುಫ್ 60 ಎಸೆತಗಳಲ್ಲಿ 63 ರನ್ ಗಳಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು. ಒಂದು ಹಂತದಲ್ಲಿ ಪಾಕಿಸ್ತಾನ ಇನ್ನೂ ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿತ್ತಾದರೂ, ಕೊನೆಯ ಆರು ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ಭರ್ಜರಿ ಕಮ್ ಬ್ಯಾಕ್ ಮಾಡಿ ಆರು ವಿಕೆಟ್ ಕಬಳಿಸುವ ಮೂಲಕ ಎದುರಾಳಿಗಳಿಗೆ ಕಡಿವಾಣ ಹಾಕಿದರು. ಭಾರತದ ಪರ ಕಾವ್ಯ ಪಟೇಲ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಸಿ ವೆಂಕಟ ಮೂರು ವಿಕೆಟ್ ಉರುಳಿಸಿದರು.
ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡು ಏಷ್ಯಾ ಕಪ್ ಟ್ರೋಫಿಗೆ ಮುತ್ತಿಕ್ಕುವ ತವಕದಲ್ಲಿರುವ ಭಾರತ ತಂಡವು ಬೃಹತ್ ಗುರಿ ಬೆನ್ನಟ್ಟಲು ಕಣಕ್ಕಿಳಿದಿದೆ. ಆರಂಭಿಕರಾಗಿ ಆರ್ಯವೀರ್ ಸೆಹ್ವಾಗ್ ಮತ್ತು ನಾಯಕ ಲಕ್ಷ್ಯ ರಾಯಚಂದಾನಿ ಬ್ಯಾಟಿಂಗ್ ಆರಂಭಿಸಿದ್ದು, 4 ಓವರ್ ನಲ್ಲಿ 18 ರನ್ ಗಳಿಸಿದ್ದಾರೆ. ಈ ಟೂರ್ನಿಯುದ್ದಕ್ಕೂ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿರುವ ಆರ್ಯವೀರ್ ಸೆಹ್ವಾಗ್, ತಮ್ಮ ತಂದೆ ವೀರೇಂದ್ರ ಸೆಹ್ವಾಗ್ ಅವರಂತೆಯೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಜಯ ತಂದುಕೊಡಲಿದ್ದಾರೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.