ಯುವ ಕ್ರಿಕೆಟ್ ಸಂವೇದನೆ ವೈಭವ್ ಸೂರ್ಯವಂಶಿ ತಮ್ಮ ಸರಳತೆಯಿಂದ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಈ ಪ್ರತಿಭಾವಂತ ಆಟಗಾರ, ತಮ್ಮನ್ನು ಭೇಟಿಯಾಗಲು ಬಂದ ಪುಟ್ಟ ಅಭಿಮಾನಿಯೊಬ್ಬ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದಾಗ ಪ್ರೀತಿಯಿಂದ ತಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ದೃಶ್ಯಗಳ ಪ್ರಕಾರ, ವೈಭವ್ ಸೂರ್ಯವಂಶಿ ಅವರು ತಮ್ಮ ಪುಟ್ಟ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಕ್ಕಳ ಗುಂಪಿನಲ್ಲಿದ್ದ ಬಾಲಕನೊಬ್ಬ ಗೌರವ ಸೂಚಕವಾಗಿ ವೈಭವ್ ಕಾಲು ಮುಟ್ಟಲು ಮುಂದಾಗುತ್ತಿದ್ದಂತೆ, ಕೂಡಲೇ ಎಚ್ಚೆತ್ತುಕೊಂಡ ಯುವ ಕ್ರಿಕೆಟಿಗ ಆತನನ್ನು ಕೈಗಳಿಂದ ತಡೆದಿದ್ದಾರೆ. ಬಾಲಕನನ್ನು ಬಾಗಲು ಬಿಡದೆ ವಿನಮ್ರತೆಯಿಂದ ತಡೆದ ಅವರು, ಬಳಿಕ ಎಲ್ಲ ಮಕ್ಕಳೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ಬೆರೆತು ಸಂಭ್ರಮಿಸಿದ್ದಾರೆ.
ಈ ಘಟನೆಯು ವೈಭವ್ ಸೂರ್ಯವಂಶಿ ಅವರ ವೃತ್ತಿಜೀವನದ ಮಹತ್ವದ ದಿನದಂದು ನಡೆದಿದೆ. ಕೇವಲ 15 ವರ್ಷ 232 ದಿನಗಳ ವಯಸ್ಸಿನಲ್ಲಿ ಬಿಹಾರ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಿದ ಅವರು, ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಪಂದ್ಯದಲ್ಲಿ ವೈಭವ್ 18 ರನ್ ಗಳಿಸಿ ಔಟಾದರಾದರೂ, ಮೈದಾನದ ಹೊರಗಿನ ಅವರ ಈ ಗುಣಮಟ್ಟದ ನಡೆ ಮತ್ತು ಸರಳತೆಯು ಕ್ರೀಡಾಪ್ರೇಮಿಗಳ ಹೃದಯ ಕದ್ದಿದೆ.