ನಟಿ ಕೀರ್ತಿ ಸುರೇಶ್ ಮತ್ತು ನಿರ್ದೇಶಕ ಹಾಗೂ ನಟ ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸತ್ಯವಾನ್ ಸಾವಿತ್ರಿ ಸಿನಿಮಾದ ಸುದ್ದಿಗೋಷ್ಠಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬುಧವಾರ ಚೆನ್ನೈನಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಮಿಸ್ಕಿನ್ ಅವರು ಕೀರ್ತಿ ಸುರೇಶ್ ಅವರನ್ನು ಹೊಗಳುವ ಭರದಲ್ಲಿ ತೊಡೆಯ ಬಳಿ ಕೈಯಿಟ್ಟಿದ್ದು, ಈ ವೇಳೆ ನಟಿ ತೀವ್ರ ಮುಜುಗರಕ್ಕೊಳಗಾದಂತೆ ಕಂಡುಬಂದಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಕೆಲವರು ಸಿನಿಮಾಗಳಲ್ಲಿ ಇಂತಹ ದೃಶ್ಯಗಳಲ್ಲಿ ನಟಿಸುವ ಕೀರ್ತಿ ಸುರೇಶ್ ಇಲ್ಲಿ ಯಾಕೆ ಇಷ್ಟೊಂದು ಅಸಹಜವಾಗಿ ವರ್ತಿಸಿದ್ದಾರೆ ಎಂದು ಪ್ರಶ್ನಿಸಿದ್ದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಹುತೇಕ ನೆಟ್ಟಿಗರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಸಿನಿಮಾದಲ್ಲಿ ನಟಿಸುವುದು ವೃತ್ತಿಪರತೆ ಮತ್ತು ಒಪ್ಪಿಗೆಯ ಮೇರೆಗೆ ನಡೆಯುತ್ತದೆ, ಆದರೆ ನಿಜಜೀವನದಲ್ಲಿ ಅನುಮತಿಯಿಲ್ಲದೆ ಸ್ಪರ್ಶಿಸುವುದು ಸರಿಯಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಕುರಿತು ಕೀರ್ತಿ ಸುರೇಶ್ ಆಗಲಿ ಅಥವಾ ಮಿಸ್ಕಿನ್ ಆಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನವೆಂಬರ್ 20ರಂದು ಬಿಡುಗಡೆಯಾಗಲಿರುವ ತಮಿಳು ಚಿತ್ರ ಸತ್ಯವಾನ್ ಸಾವಿತ್ರಿ ಈ ಹಿಂದೆ ಜುಲೈನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಈ ಸಿನಿಮಾ ಈಗ ಧನುಷ್ ಮತ್ತು ಸಾಯಿ ಪಲ್ಲವಿ ಅಭಿನಯದ ಓಂ ಚಿತ್ರದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸಲಿದೆ. ಇದರ ಜೊತೆಗೆ ಕೀರ್ತಿ ಸುರೇಶ್ ಅವರ ಕೈಯಲ್ಲಿ ಕಣ್ಣಿವೇಡಿ, ತೋಟ್ಟಂ, ರೌಡಿ ಜನಾರ್ದನ, ರಫ್ತಾರ್ ಮತ್ತು ಜನವರಿ 12 ವಿಡುದಲ ಸೇರಿದಂತೆ ಹಲವು ಸಿನಿಮಾಗಳಿವೆ.