ಬಾಲಿವುಡ್ ನಟ ರಣವೀರ್ ಸಿಂಗ್ ಅವರ ವಿಭಿನ್ನ ಸ್ಟೈಲ್ ಮತ್ತು ಎನರ್ಜಿಗೆ ಅಭಿಮಾನಿಗಳು ಯಾವಾಗಲೂ ಫಿದಾ. ಆದರೆ ಈ ಬಾರಿ ಅವರ ನಟನೆ ಅಥವಾ ಸಿನಿಮಾ ಲುಕ್ಗಿಂತ ಹೊಸ ಜಾಹೀರಾತಿನಲ್ಲಿನ ಅವತಾರವೇ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಕರ್ಷಕ ಮೈಕಟ್ಟು, ಬಲಿಷ್ಠ ತೋಳುಗಳು, ಸ್ಟೈಲಿಶ್ ಹೇರ್ಸ್ಟೈಲ್ನೊಂದಿಗೆ ಕಾಣಿಸಿಕೊಂಡಿರುವ ರಣವೀರ್ ಅವರನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಕೆಲವರು ಪ್ರೀತಿಯಿಂದ ಅವರಿಗೆ ‘ಡ್ಯಾಡಿ ಸಿಂಗ್’ (Daddy Singh) ಎಂಬ ಹೊಸ ಹೆಸರನ್ನೂ ನೀಡಿದ್ದಾರೆ!
ಹೌದು. ರಣವೀರ್ ಸಿಂಗ್ ಅವರ ಪುರುಷರ ಸ್ಕಿನ್ಕೇರ್ ಮತ್ತು ಹೇರ್ಕೇರ್ ಬ್ರ್ಯಾಂಡ್ನ ಹೊಸ ಜಾಹೀರಾತು ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಇನ್ಸ್ಟಾಗ್ರಾಂನಲ್ಲಿ ಅವರ ಹೊಸ ಲುಕ್ಗೆ ಸಂಬಂಧಿಸಿದ ಕಾಮೆಂಟ್ಗಳು ವೈರಲ್ ಆಗುತ್ತಿವೆ.
ಪುರುಷರಿಗಾಗಿ ಹೊಸ ಬ್ರ್ಯಾಂಡ್ ಆರಂಭಿಸಿದ ರಣವೀರ್!
ಬಾಲಿವುಡ್ ನಟ ರಣವೀರ್ ಸಿಂಗ್ ಅವರು boAt ಸಹ-ಸಂಸ್ಥಾಪಕ ಅಮನ್ ಗುಪ್ತಾ ಅವರೊಂದಿಗೆ ಕೈಜೋಡಿಸಿ ಪುರುಷರಿಗಾಗಿ ‘H.I.M’ (Handsome Indian Man) ಎಂಬ ಸ್ಕಿನ್ಕೇರ್ ಮತ್ತು ಹೇರ್ಕೇರ್ ಬ್ರ್ಯಾಂಡ್ ಆರಂಭಿಸಿದ್ದಾರೆ.
ಈ ಬ್ರ್ಯಾಂಡ್ನ ಪ್ರಚಾರ ಜಾಹೀರಾತಿನಲ್ಲಿ ರಣವೀರ್ ತಮ್ಮ ಆಕರ್ಷಕ ಮೈಕಟ್ಟು ಹಾಗೂ ವಿಭಿನ್ನ ಕೇಶವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ‘ಧುರಂಧರ್’ ಸಿನಿಮಾದಲ್ಲಿನ ಅವರ ಹೇರ್ ಫ್ಲಿಪ್ ದೃಶ್ಯವನ್ನು ನೆನಪಿಸುವ ರೀತಿಯಲ್ಲಿ ಕೂದಲನ್ನು ತಿರುಗಿಸುವ ದೃಶ್ಯ ಅಭಿಮಾನಿಗಳ ಗಮನ ಸೆಳೆದಿದೆ.
ಶಾಂಪೂ, ಫೇಸ್ವಾಶ್ ಸೇರಿದಂತೆ ಹಲವು ಉತ್ಪನ್ನಗಳು
H.I.M ಬ್ರ್ಯಾಂಡ್ ಅಡಿಯಲ್ಲಿ ಪುರುಷರಿಗಾಗಿ ಶಾಂಪೂ, ಬಾಡಿ ವಾಶ್, ಫೇಸ್ ವಾಶ್ ಸೇರಿದಂತೆ ಹಲವು ಸ್ಕಿನ್ಕೇರ್ ಮತ್ತು ಹೇರ್ಕೇರ್ ಉತ್ಪನ್ನಗಳನ್ನು ಪರಿಚಯಿಸಲಾಗಿದೆ.
ಪುರುಷರ ತ್ವಚೆ ಸಾಮಾನ್ಯವಾಗಿ ದಪ್ಪವಾಗಿರುವುದರಿಂದ ಅದಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ರಣವೀರ್ ತಿಳಿಸಿದ್ದಾರೆ. ತ್ವಚೆಗೆ ಉತ್ತಮ ತೇವಾಂಶ ಒದಗಿಸುವುದು ಮತ್ತು ಉತ್ಪನ್ನಗಳು ಪರಿಣಾಮಕಾರಿಯಾಗಿ ಹೀರಿಕೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ.ತಾವು ಸ್ವತಃ ಈ ಉತ್ಪನ್ನಗಳನ್ನು ಬಳಸಿದ್ದು, ಚಳಿಗಾಲ ಹಾಗೂ ವಾಯುಮಾಲಿನ್ಯದ ಸಂದರ್ಭದಲ್ಲಿಯೂ ಬಳಸಬಹುದಾದಂತೆ ಅವುಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘Daddy Singh’ ಎಂದ ಅಭಿಮಾನಿಗಳು!
ಜಾಹೀರಾತು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಅವರ ಹೊಸ ಲುಕ್ ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಕೂಡ ಅವರ ಲುಕ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಣವೀರ್ ಅವರ ಸಹನಟ ಉದಯ್ಬೀರ್ ಸಂಧು ‘Saxxxyy’ ಎಂದು ಕಾಮೆಂಟ್ ಮಾಡಿದ್ದಾರೆ. ಸ್ಟೈಲಿಸ್ಟ್ ಪ್ರಿಯಾಂಕಾ ಕಪಾಡಿಯಾ ಬದಾನಿ ಫೈರ್ ಎಮೋಜಿಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಚಾಂದಿನಿ ಭಾಬ್ಡಾ ಅವರು ‘Presenting HIM – Daddy Singh’ ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ ‘Truly HIM’ ಎಂದು ಹೊಗಳಿದ್ದಾರೆ. ಇನ್ನೂ ಕೆಲವರು ‘Why are you looking so delicious Ranno?’ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಜಾಹೀರಾತಿಗೂ ಮುನ್ನವೇ ವೈರಲ್ ಆಗಿದ್ದ ಫೋಟೋಗಳು!
H.I.M ಬ್ರ್ಯಾಂಡ್ನ ಉತ್ಪನ್ನಗಳ ಅಧಿಕೃತ ಪರಿಚಯಕ್ಕೂ ಮುನ್ನವೇ ರಣವೀರ್ ಸಿಂಗ್ ತಮ್ಮ ಕೆಲವು ಶರ್ಟ್ಲೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪ್ರತಿಯೊಂದು ಫೋಟೋಗೆ ‘I am HIM’ ಎಂಬ ಕ್ಯಾಪ್ಷನ್ ನೀಡಿದ್ದರು.
ಈ ಫೋಟೋಗಳಿಗೆ ನಟ ಅರ್ಜುನ್ ರಾಂಪಾಲ್ ‘Bas kar yaar’ ಎಂದು ಪ್ರತಿಕ್ರಿಯಿಸಿದ್ದರು. ಅನಿಲ್ ಕಪೂರ್, ಭೂಮಿ ಪೆಡ್ನೇಕರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಫೈರ್ ಎಮೋಜಿಗಳ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಒಟ್ಟಿನಲ್ಲಿ, ಸಿನಿಮಾಗಳಲ್ಲಿನ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ರಣವೀರ್ ಸಿಂಗ್, ಇದೀಗ ತಮ್ಮ ಹೊಸ ಉದ್ಯಮ ಮತ್ತು ಆಕರ್ಷಕ ಜಾಹೀರಾತಿನ ಮೂಲಕವೂ ಸುದ್ದಿಯಲ್ಲಿದ್ದಾರೆ. ‘ಡ್ಯಾಡಿ ಸಿಂಗ್’ ಎಂಬ ಅಭಿಮಾನಿಗಳ ಹೊಸ ಕರೆಯೂ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.