ಐಪಿಎಲ್ 2027ಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (DC) ಫ್ರಾಂಚೈಸಿಯಿಂದ ಬಿಡುಗಡೆಯಾಗಿದ್ದ ಯುವ ವಿಕೆಟ್‌ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್, ದೇಶೀಯ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಬುಧವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ನಾಯಕ ಅಭಿಮನ್ಯು ಈಶ್ವರನ್ ಮತ್ತು ಅಭಿಷೇಕ್ ಪೊರೆಲ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಬಂಗಾಳ ತಂಡವು ಹಾಲಿ ಚಾಂಪಿಯನ್ ಜಾರ್ಖಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ತಂಡದ ಪರ ವಿರಾಟ್ ಸಿಂಗ್ (ಅಜೇಯ 45) ಮತ್ತು ಶಿಖರ್ ಮೋಹನ್ (42) ಉಪಯುಕ್ತ ಕಾಣಿಕೆ ನೀಡಿದರು. ಬಂಗಾಳ ಪರ ಶಿಸ್ತುಬದ್ಧ ದಾಳಿ ನಡೆಸಿದ ಮುಖೇಶ್ ಕುಮಾರ್, ಸಯನ್ ಘೋಷ್ ಮತ್ತು ರಿಷಭ್ ಚೌಧರಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
149 ರನ್‌ಗಳ ಗುರಿ ಬೆನ್ನಟ್ಟಿದ ಬಂಗಾಳ ಆರಂಭದಲ್ಲೇ ಕರಣ್ ಲಾಲ್ (10) ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಜೊತೆಯಾದ ನಾಯಕ ಅಭಿಮನ್ಯು ಈಶ್ವರನ್ ಮತ್ತು ಅಭಿಷೇಕ್ ಪೊರೆಲ್ 92 ರನ್‌ಗಳ ಭರ್ಜರಿ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೆಲ್ಲಿ ತಂಡದಿಂದ ರಿಲೀಸ್ ಆದ ಬೇಸರವನ್ನು ಮರೆತು ಬ್ಯಾಟ್ ಬೀಸಿದ ಪೊರೆಲ್, 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 49 ರನ್ ಚಚ್ಚಿ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು. ಮತ್ತೊಂದೆಡೆ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಈಶ್ವರನ್ 48 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿ 18.4 ಓವರ್‌ಗಳಲ್ಲಿ ತಂಡಕ್ಕೆ ಜಯ ತಂದುಕೊಟ್ಟರು.
ಯಶ್ ಧುಲ್ ಶತಕ ವ್ಯರ್ಥ: ಬಲಿಷ್ಠ ಡೆಲ್ಲಿಗೆ ಶಾಕ್ ನೀಡಿದ ಬಿಹಾರ! ಇಂದೋರ್‌ನಲ್ಲಿ ನಡೆದ ‘ಬಿ’ ಗುಂಪಿನ ಮತ್ತೊಂದು ರೋಚಕ ಪಂದ್ಯದಲ್ಲಿ ಸ್ಟಾರ್ ಆಟಗಾರರನ್ನೊಳಗೊಂಡ ಡೆಲ್ಲಿ ತಂಡಕ್ಕೆ ಬಿಹಾರ 2 ವಿಕೆಟ್‌ಗಳ ಆಘಾತ ನೀಡಿದೆ. ಡೆಲ್ಲಿ ಪರ ಯಶ್ ಧುಲ್ ಕೇವಲ 59 ಎಸೆತಗಳಲ್ಲಿ 16 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 125 ರನ್ ಚಚ್ಚಿದರೆ, ತೇಜಸ್ವಿ ದಹಿಯಾ 25 ಎಸೆತಗಳಲ್ಲಿ 51 ರನ್ ಗಳಿಸಿದರು. ಪರಿಣಾಮ ಡೆಲ್ಲಿ 5 ವಿಕೆಟ್‌ಗೆ 224 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆದರೆ ಪ್ರಿಯಾಂಶ್ ಆರ್ಯ ಮತ್ತು ನಿತೀಶ್ ರಾಣಾ ವೈಫಲ್ಯ ಅನುಭವಿಸಿದರು.
225 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಬಿಹಾರ, ಆಯುಷ್ ಲೋಹರುಕಾ (50) ಮತ್ತು ಬಿಪಿನ್ ಸೌರಭ್ (49) ಅವರ ಸ್ಫೋಟಕ ಆರಂಭದ ನೆರವಿನಿಂದ ಭರ್ಜರಿ ಪ್ರತ್ಯುತ್ತರ ನೀಡಿತು. ಒಂದು ಹಂತದಲ್ಲಿ 189 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದ ಬಿಹಾರಕ್ಕೆ, 9ನೇ ವಿಕೆಟ್‌ಗೆ ಜೊತೆಯಾದ ಮಯಾಂಕ್ ಕುಮಾರ್ (ಅಜೇಯ 24) ಮತ್ತು ಪ್ರಶಾಂತ್ ಸಿಂಗ್ (ಅಜೇಯ 13) ಮುರಿಯದ 37 ರನ್ ಸೇರಿಸಿ 1 ಎಸೆತ ಬಾಕಿ ಇರುವಂತೆಯೇ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.