ಒಂದು ಕಾರ್ಯಕ್ರಮದಲ್ಲಿ ಧರಿಸುವ ಉಡುಪು ಚೆನ್ನಾಗಿ ಹೊಂದಿಕೊಳ್ಳಬೇಕು, ಫೋಟೋಗಳಲ್ಲಿ ಸ್ಲಿಮ್ ಆಗಿ ಕಾಣಿಸಬೇಕು ಎಂಬ ಕಾರಣಕ್ಕೆ ಕೆಲವರು ಕೊನೆಯ ಕ್ಷಣದಲ್ಲಿ ಬ್ಯೂಟಿ ಟ್ರೀಟ್‌ಮೆಂಟ್‌ಗಳ ಮೊರೆ ಹೋಗುತ್ತಾರೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ಕೂಡ ತಮ್ಮ ಉಡುಪಿಗೆ ಸರಿಯಾಗಿ ಹೊಂದಿಕೊಳ್ಳಲು ಲಿಂಫಾಟಿಕ್ ಡ್ರೈನೇಜ್ ಮಸಾಜ್ ಮಾಡಿಸಿಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಆದರೆ ಈ ಮಸಾಜ್ ನಿಜಕ್ಕೂ ದೇಹವನ್ನು ತೆಳ್ಳಗೆ ಮಾಡುತ್ತದೆಯೇ? ಆರೋಗ್ಯವಂತರು ಕೇವಲ ಸ್ಲಿಮ್ ಲುಕ್‌ಗಾಗಿ ಇದನ್ನು ಮಾಡಿಸಿಕೊಳ್ಳುವುದು ಸೂಕ್ತವೇ? ಎಂಬ ಚರ್ಚೆ ಈಗ ಶುರುವಾಗಿದೆ.
ಕಾಫಿ ವಿತ್ ಕರಣ್ ಸೀಸನ್ 9ರ ಇತ್ತೀಚಿನ ಸಂಚಿಕೆಯಲ್ಲಿ ನಟಿ ಅನನ್ಯಾ ಪಾಂಡೆ ಹಾಗೂ ಉದ್ಯಮಿ ಅನನ್ಯಾ ಬಿರ್ಲಾ ಭಾಗವಹಿಸಿದ್ದರು. ಈ ವೇಳೆ ಅನನ್ಯಾ ಪಾಂಡೆ ತಮ್ಮ ಉಡುಪಿಗೆ ಹೊಂದಿಕೊಳ್ಳಲು ಲಿಂಫಾಟಿಕ್ ಡ್ರೈನೇಜ್ ಮಸಾಜ್ ಮಾಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಈ ಚಿಕಿತ್ಸೆಯ ಬಳಿಕ ಬ್ರೈನ್ ಫಾಗ್ ಅನುಭವಿಸುತ್ತಿರಬಹುದು ಎಂದೂ ಅವರು ಉಲ್ಲೇಖಿಸಿದ್ದಾರೆ.ಇದರಿಂದ ಫ್ಯಾಷನ್ ಮತ್ತು ಸೌಂದರ್ಯ ಲೋಕದಲ್ಲಿ ಚರ್ಚೆಯಾಗುತ್ತಿರುವ ಲಿಂಫಾಟಿಕ್ ಡ್ರೈನೇಜ್ ಮಸಾಜ್ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ.
ಏನಿದು ಲಿಂಫಾಟಿಕ್ ಡ್ರೈನೇಜ್ ಮಸಾಜ್?
ಲಿಂಫಾಟಿಕ್ ಡ್ರೈನೇಜ್ ಎನ್ನುವುದು ದೇಹದಲ್ಲಿನ ದುಗ್ಧರಸ ದ್ರವ (Lymph Fluid) ಸರಾಗವಾಗಿ ಹರಿಯಲು ನೆರವಾಗುವ ವಿಶೇಷ ಮಸಾಜ್ ವಿಧಾನ. ದೇಹದ ಅಂಗಾಂಶಗಳಲ್ಲಿ ಸಂಗ್ರಹವಾಗುವ ಹೆಚ್ಚುವರಿ ದ್ರವ, ಪ್ರೋಟೀನ್ ಹಾಗೂ ತ್ಯಾಜ್ಯ ವಸ್ತುಗಳನ್ನು ದುಗ್ಧರಸ ವ್ಯವಸ್ಥೆ ಸಂಗ್ರಹಿಸಿ ಮತ್ತೆ ರಕ್ತಪ್ರವಾಹಕ್ಕೆ ಸೇರಿಸುತ್ತದೆ.
ದೇಹದಲ್ಲಿ ದ್ರವ ಸಂಗ್ರಹವಾಗಿ ಊತ ಕಾಣಿಸಿಕೊಳ್ಳುವ ಲಿಂಫಿಡೆಮಾ ಸಮಸ್ಯೆಯಿರುವವರಿಗೆ ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ ಈ ಮಸಾಜ್ ಬಳಸಲಾಗುತ್ತದೆ. ಇದು ಸಾಮಾನ್ಯ ಮಸಾಜ್‌ನಂತೆ ಬಲವಾದ ಒತ್ತಡ ನೀಡುವ ವಿಧಾನವಲ್ಲ. ನಿಧಾನವಾದ, ಮೃದುವಾದ ಹಾಗೂ ಲಯಬದ್ಧ ಚಲನೆಗಳ ಮೂಲಕ ದುಗ್ಧರಸ ದ್ರವದ ಹರಿವಿಗೆ ನೆರವಾಗಲಾಗುತ್ತದೆ.
ಮಸಾಜ್ ಮಾಡಿಸಿದರೆ ನಿಜವಾಗಿಯೂ ಸ್ಲಿಮ್ ಆಗುತ್ತಾರಾ?
ಈ ಮಸಾಜ್ ಮಾಡಿದ ಬಳಿಕ ಕೆಲವರು ಮುಖ ಅಥವಾ ದೇಹದ ಭಾಗಗಳು ತೆಳ್ಳಗೆ ಕಾಣಿಸುತ್ತಿವೆ ಎಂದು ಅನುಭವಿಸಬಹುದು. ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ದ್ರವ ಕಡಿಮೆಯಾದಾಗ ಊತ ಮತ್ತು ಪಫಿನೆಸ್ ಇಳಿಯಬಹುದು. ಇದರಿಂದ ತಾತ್ಕಾಲಿಕವಾಗಿ ಸ್ಲಿಮ್ ಲುಕ್ ಸಿಗಬಹುದು.
ಆದರೆ ನೆನಪಿಡಿ, ಈ ಮಸಾಜ್ ದೇಹದ ಕೊಬ್ಬನ್ನು ಕರಗಿಸುವುದಿಲ್ಲ, ಶಾಶ್ವತವಾಗಿ ತೂಕ ಇಳಿಸುವುದೂ ಇಲ್ಲ. ದೇಹದ ದ್ರವದ ಪ್ರಮಾಣದಲ್ಲಿ ಆಗುವ ಬದಲಾವಣೆಯಿಂದ ಮಾತ್ರ ತಾತ್ಕಾಲಿಕ ವ್ಯತ್ಯಾಸ ಕಾಣಿಸಬಹುದು.
ಆರೋಗ್ಯವಂತರು ಮಾಡಿಸಿಕೊಳ್ಳುವುದು ಸೂಕ್ತವೇ?
ಮಣಿಪಾಲ್ ಆಸ್ಪತ್ರೆ, ಓಲ್ಡ್ ಏರ್‌ಪೋರ್ಟ್ ರಸ್ತೆಯ ವಾಸ್ಕ್ಯುಲರ್ ಮತ್ತು ಎಂಡೋವಾಸ್ಕ್ಯುಲರ್ ಸರ್ಜರಿ ವಿಭಾಗದ ಕನ್ಸಲ್ಟೆಂಟ್ ಡಾ. ರಾಹುಲ್ ಎನ್.ಎಸ್. ಅವರ ಪ್ರಕಾರ, ಲಿಂಫಾಟಿಕ್ ಡ್ರೈನೇಜ್‌ನಿಂದ ತಾತ್ಕಾಲಿಕವಾಗಿ ತೆಳ್ಳಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಯಾವುದೇ ವೈದ್ಯಕೀಯ ಸಮಸ್ಯೆ ಅಥವಾ ಊತ ಇಲ್ಲದ ಆರೋಗ್ಯವಂತರು ಕೇವಲ ಸ್ಲಿಮ್ ಆಗಿ ಕಾಣಿಸಿಕೊಳ್ಳಲು ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಸೂಕ್ತವಲ್ಲ.
ಈ ಮಸಾಜ್‌ನಿಂದ ಏನೆಲ್ಲ ಪ್ರಯೋಜನ?
ವೈದ್ಯಕೀಯ ಅಗತ್ಯವಿರುವವರಿಗೆ ಲಿಂಫಾಟಿಕ್ ಡ್ರೈನೇಜ್ ಮಸಾಜ್ ಕೆಲವು ರೀತಿಯಲ್ಲಿ ನೆರವಾಗಬಹುದು.
-
ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ದ್ರವ ಕಡಿಮೆ ಮಾಡಲು ನೆರವಾಗಬಹುದು.
-
ಊತ ಮತ್ತು ಪಫಿನೆಸ್ ಇಳಿಸಲು ಸಹಾಯ ಮಾಡಬಹುದು.
-
ದೇಹದ ಭಾರ ಹಾಗೂ ಅಸ್ವಸ್ಥತೆಯ ಭಾವನೆ ಕಡಿಮೆ ಮಾಡಬಹುದು.
-
ಲಿಂಫಿಡೆಮಾ ಸಮಸ್ಯೆಯ ನಿರ್ವಹಣೆಯಲ್ಲಿ ಚಿಕಿತ್ಸೆಯ ಭಾಗವಾಗಬಹುದು.
ಅಡ್ಡಪರಿಣಾಮಗಳೂ ಇರಬಹುದು!
ಈ ಮಸಾಜ್ ಎಲ್ಲರಿಗೂ ಸುರಕ್ಷಿತ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ಚಿಕಿತ್ಸೆಯ ಬಳಿಕ ಆಯಾಸ, ತಲೆನೋವು, ವಾಕರಿಕೆ ಅಥವಾ ಪದೇಪದೇ ಮೂತ್ರ ವಿಸರ್ಜನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವು ಆರೋಗ್ಯ ಸಮಸ್ಯೆಗಳಿರುವವರಲ್ಲಿ ಸೋಂಕು, ಸೆಲ್ಯುಲೈಟಿಸ್ ಅಥವಾ ರಕ್ತ ಹೆಪ್ಪುಗಟ್ಟುವಿಕೆ (DVT) ಸೇರಿದಂತೆ ಗಂಭೀರ ಅಪಾಯಗಳೂ ಇರಬಹುದು.
ಯಾರಿಗೆ ಈ ಮಸಾಜ್ ಅಪಾಯಕಾರಿ?
ಕೆಲವು ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆ ಇಲ್ಲದೆ ಲಿಂಫಾಟಿಕ್ ಡ್ರೈನೇಜ್ ಮಾಡಿಸಿಕೊಳ್ಳಬಾರದು. ವಿಶೇಷವಾಗಿ:
-
ಸಕ್ರಿಯ ಸೋಂಕು ಇರುವವರು
-
ರಕ್ತ ಹೆಪ್ಪುಗಟ್ಟುವಿಕೆ ಅಥವಾ DVT ಸಮಸ್ಯೆಯಿರುವವರು
-
ಕೆಲವು ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು
-
ಮೂತ್ರಪಿಂಡದ ಸಮಸ್ಯೆ ಇರುವವರು
ದೇಹದಲ್ಲಿ ಯಾವುದೇ ಕಾರಣವಿಲ್ಲದೆ ಊತ ಕಾಣಿಸಿಕೊಂಡರೆ ಅದನ್ನು ಮಸಾಜ್ ಮೂಲಕ ಕಡಿಮೆ ಮಾಡಲು ಪ್ರಯತ್ನಿಸುವ ಬದಲು ಮೊದಲು ವೈದ್ಯರನ್ನು ಸಂಪರ್ಕಿಸಿ ಕಾರಣ ತಿಳಿದುಕೊಳ್ಳುವುದು ಮುಖ್ಯ.
ಒಟ್ಟಿನಲ್ಲಿ, ಫೋಟೋಗಳಲ್ಲಿ ಸ್ಲಿಮ್ ಆಗಿ ಕಾಣಿಸಿಕೊಳ್ಳಲು ಅಥವಾ ಉಡುಪು ಹೊಂದಿಸಲು ಲಿಂಫಾಟಿಕ್ ಡ್ರೈನೇಜ್ ಮಾಡಿಸಿಕೊಳ್ಳುವುದು ಆಕರ್ಷಕವಾಗಿ ಕಂಡರೂ, ಇದು ತೂಕ ಇಳಿಸುವ ಚಿಕಿತ್ಸೆಯಲ್ಲ. ವೈದ್ಯಕೀಯ ಅಗತ್ಯವಿದ್ದಾಗ ಮಾತ್ರ ತಜ್ಞರ ಸಲಹೆಯೊಂದಿಗೆ ಮಾಡಿಸಿಕೊಳ್ಳುವುದು ಉತ್ತಮ.
Disclaimer
ಈ ಲೇಖನವು ಆರೋಗ್ಯ ಜಾಗೃತಿಗಾಗಿ ನೀಡಲಾದ ಮಾಹಿತಿಯಾಗಿದೆ. ಲಿಂಫಾಟಿಕ್ ಡ್ರೈನೇಜ್ ಮಸಾಜ್ ಮಾಡಿಸಿಕೊಳ್ಳುವ ಮೊದಲು ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆಯಿರಿ. ಈ ಮಾಹಿತಿಯನ್ನು ವೈದ್ಯಕೀಯ ಚಿಕಿತ್ಸೆ ಅಥವಾ ವೈಯಕ್ತಿಕ ವೈದ್ಯರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬೇಡಿ.