ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದೊಡ್ಡ ಆಘಾತ ನೀಡಿದೆ. 2026-27ರ ಸಾಲಿನ ನೂತನ ಪುರುಷರ ಕೇಂದ್ರ ಗುತ್ತಿಗೆ ಪಟ್ಟಿಯಿಂದ ರಿಜ್ವಾನ್ ಅವರನ್ನು ಕೈಬಿಡಲಾಗಿದೆ. ರಿಜ್ವಾನ್ ಮತ್ತು ಸಹ ಆಟಗಾರ ಇಮಾಮ್-ಉಲ್-ಹಕ್ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಕುರಿತು ರಾಷ್ಟ್ರೀಯ ಸೈಬರ್ ಕ್ರೈಮ್ ತನಿಖಾ ಸಂಸ್ಥೆ (ಎನ್‌ಸಿಸಿಐಎ) ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಮಂಡಳಿ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡ 0-3 ಅಂತರದ ಹೀನಾಯ ಸೋಲು ಅನುಭವಿಸಿದ ಬಳಿಕ ಈ ವಿವಾದ ಭುಗಿಲೆದ್ದಿತ್ತು. ಪ್ರವಾಸದ ವೇಳೆ ತಂಡದ ಗೌಪ್ಯ ಮಾಹಿತಿ ಮತ್ತು ಡ್ರೆಸ್ಸಿಂಗ್ ರೂಮ್ ವಿಚಾರಗಳು ಸೋರಿಕೆಯಾಗಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಿಸಿಬಿ ಆಂತರಿಕ ವಿಚಾರಣೆ ನಡೆಸಿದ ಬಳಿಕ, ಪ್ರಕರಣವನ್ನು ಸೈಬರ್ ಕ್ರೈಮ್ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು.
ತನಿಖೆಯ ಭಾಗವಾಗಿ ಈಗಾಗಲೇ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನವೆಂಬರ್ 13ರಂದು ಪ್ರತಿಕ್ರಿಯಿಸಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ತನಿಖೆ ಅಂತಿಮ ಹಂತದಲ್ಲಿದ್ದು ವರದಿ ಪೂರ್ಣಗೊಳಿಸುವ ಮುನ್ನ ರಿಜ್ವಾನ್ ಅವರಿಂದ ಹೆಚ್ಚಿನ ಸ್ಪಷ್ಟನೆ ಕೇಳಲಾಗಿದೆ ಎಂದು ತಿಳಿಸಿದ್ದರು.
ನವೆಂಬರ್ 21ರಂದು ಪಿಸಿಬಿ ಪ್ರಕಟಿಸಿರುವ ನೂತನ ಗುತ್ತಿಗೆ ಪಟ್ಟಿಯಲ್ಲಿ ಬಾಬರ್ ಅಜಮ್ ಮತ್ತು ಸಲ್ಮಾನ್ ಅಲಿ ಆಘಾ ಮಾತ್ರ ಟೆಸ್ಟ್ ಹಾಗೂ ಏಕದಿನ ಎರಡೂ ವಿಭಾಗಗಳಲ್ಲಿ ಸ್ಥಾನ ಪಡೆದಿದ್ದಾರೆ. ರಿಜ್ವಾನ್ ಜೊತೆಗೆ ಶಾನ್ ಮಸೂದ್ ಮತ್ತು ಸೈಮ್ ಅಯೂಬ್ ಅವರಂತಹ ಪ್ರಮುಖ ಆಟಗಾರರನ್ನೂ ಪಟ್ಟಿಯಿಂದ ಹೊರಗಿಡಲಾಗಿದ್ದು, ಈ ಹೊಸ ಗುತ್ತಿಗೆಯು 2027ರ ಮಧ್ಯಭಾಗದವರೆಗೆ ಜಾರಿಯಲ್ಲಿರಲಿದೆ.