ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಮತಗಳ್ಳತನ’ (Vote Chori), ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಕುರಿತ ಹೇಳಿಕೆಗಳಿಗೆ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಯಾವುದೇ ಆಧಾರವಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ನವೆಂಬರ್ 28ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, 2024ರ ಲೋಕಸಭಾ ಚುನಾವಣೆಯಲ್ಲಿ 14 ಕೋಟಿ ನಕಲಿ ಮತದಾರರಿದ್ದರು ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಪ್ರಶ್ನಿಸಿದರು. ಈ ರೀತಿಯ ಹೇಳಿಕೆಗಳಿಗೆ ಯಾವುದೇ ಸಮರ್ಥನೀಯ ಆಧಾರವಿಲ್ಲ ಎಂದು ವಾಗ್ದಾಳಿ ನಡೆಸಿದರು.
“ಇಂದು ರಾಹುಲ್ ಗಾಂಧಿ ಮತ್ತೊಂದು ದೊಡ್ಡ ಹೇಳಿಕೆ ನೀಡಿದ್ದಾರೆ. 14 ಕೋಟಿ ನಕಲಿ ಮತದಾರರಿದ್ದಾರೆ ಎನ್ನುತ್ತಿದ್ದಾರೆ. ನಕಲಿ ಪ್ರಧಾನಿ, ನಕಲಿ ಮತಗಳೆಂದು ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಅವರೇ, ನಿಮಗೇನಾಗಿದೆ? ಸುಳ್ಳು ಹೇಳುವುದರಲ್ಲಿ ಪಿಎಚ್‌ಡಿ ಮಾಡಿದ್ದೀರಾ? ಅದಕ್ಕಿಂತಲೂ ಹೆಚ್ಚಿನ ಪದವಿ ಪಡೆದಿದ್ದೀರಾ? ನೀವು ಸುಳ್ಳು ಹೇಳುವುದರಲ್ಲಿ ಸೂಪರ್ ಡಾಕ್ಟರೇಟ್ ಪಡೆದಿದ್ದೀರಿ” ಎಂದು ವ್ಯಂಗ್ಯವಾಡಿದರು.
14 ಕೋಟಿ ನಕಲಿ ಮತದಾರರ ಆರೋಪಕ್ಕೆ ಬಿಜೆಪಿ ತಿರುಗೇಟು
ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್, ಮತದಾರರ ಪಟ್ಟಿಯಲ್ಲಿರುವ ಕೆಲವು ಹೆಸರುಗಳ ಕುರಿತು ಅಂಕಿಅಂಶಗಳನ್ನು ಉಲ್ಲೇಖಿಸಿದರು. ಅವರ ಪ್ರಕಾರ, ಸುಮಾರು 2.8 ಕೋಟಿ ಹೆಸರುಗಳು ಮೃತಪಟ್ಟ ವ್ಯಕ್ತಿಗಳಿಗೆ ಸಂಬಂಧಿಸಿದ್ದರೆ, 6.3 ಕೋಟಿ ಜನರು ತಮ್ಮ ನೋಂದಾಯಿತ ವಿಳಾಸದಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಒಂದು ಕೋಟಿ ಹೆಸರುಗಳು ಪುನರಾವರ್ತನೆಯಾಗಿದ್ದು, ಮೂರು ಕೋಟಿ ಮತದಾರರು ಗೈರುಹಾಜರಾಗಿದ್ದಾರೆ ಎಂದು ತಿಳಿಸಿದರು.
ಆದರೆ, ಈ ಎಲ್ಲ ವರ್ಗಗಳನ್ನೂ ನಕಲಿ ಮತದಾರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು. ವಿಳಾಸ ಬದಲಾಯಿಸಿಕೊಂಡವರು ಹೊಸ ಸ್ಥಳದಲ್ಲಿ ಮತದಾನ ಮಾಡಿರಬಹುದು. ಹೀಗಾಗಿ ಇಂತಹ ಅಂಕಿಅಂಶಗಳನ್ನು ನಕಲಿ ಮತದಾರರ ಪಟ್ಟಿಗೆ ಸೇರಿಸುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು.
ಲೋಕಸಭೆ ಸ್ಥಾನಗಳ ಸಂಖ್ಯೆ 850ಕ್ಕೆ ಏರಿಸುವ ಪ್ರಸ್ತಾವನೆಗೆ ಸಮರ್ಥನೆ
ಲೋಕಸಭೆಯ ಒಟ್ಟು ಸ್ಥಾನಗಳನ್ನು ಈಗಿರುವ 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ರಾಹುಲ್ ಗಾಂಧಿ ಟೀಕಿಸಿರುವುದಕ್ಕೂ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದರು. ಭಾರತದ ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಮತ್ತು ವೈವಿಧ್ಯತೆಯನ್ನು ಗಮನಿಸಿದರೆ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಬ್ರಿಟನ್‌ನ ಜನಸಂಖ್ಯೆ ಮತ್ತು ಅಲ್ಲಿನ ಸಂಸತ್ತಿನ ಸದಸ್ಯರ ಸಂಖ್ಯೆಯನ್ನು ಹೋಲಿಕೆ ಮಾಡಿದ ಅವರು, ಬ್ರಿಟನ್‌ನ ಜನಸಂಖ್ಯೆ ಸುಮಾರು 5.88 ಕೋಟಿ ಇದ್ದರೂ ಅಲ್ಲಿನ ಹೌಸ್ ಆಫ್ ಕಾಮನ್ಸ್‌ನಲ್ಲಿ 650 ಸದಸ್ಯರಿದ್ದಾರೆ ಎಂದು ಉಲ್ಲೇಖಿಸಿದರು.
“140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶಾಲ ಮತ್ತು ವೈವಿಧ್ಯಮಯ ದೇಶವಾದ ಭಾರತದಲ್ಲಿ ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸಿದರೆ ಸಮಸ್ಯೆಯೇನು? ಇದು ನಡೆಯಬೇಕಾದ ಸಕಾರಾತ್ಮಕ ಬೆಳವಣಿಗೆ” ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ರವಿಶಂಕರ್ ಪ್ರಸಾದ್, ಕಾಂಗ್ರೆಸ್‌ಗೆ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಿದ ಇತಿಹಾಸವಿದೆ ಎಂದು ಆರೋಪಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರನ್ನು ಜೈಲಿಗೆ ಹಾಕಲಾಗಿತ್ತು ಎಂದು ಟೀಕಿಸಿದರು.
ರಾಹುಲ್ ಗಾಂಧಿ ಮಹಿಳಾ ವಿರೋಧಿ ಎಂದು ಬಿಜೆಪಿ ಸಂಸದ ಆರೋಪ
ಮಹಿಳಾ ಮೀಸಲಾತಿ ಜಾರಿಗೆ ತರುವ ಸರ್ಕಾರದ ಪ್ರಸ್ತಾವನೆ ಕುರಿತು ರಾಹುಲ್ ಗಾಂಧಿ ವ್ಯಕ್ತಪಡಿಸಿರುವ ಟೀಕೆಗಳಿಗೂ ರವಿಶಂಕರ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಹಿಳಾ ಸಬಲೀಕರಣಕ್ಕೆ ವಿರೋಧವಾಗಿದ್ದಾರೆ ಎಂದು ಆರೋಪಿಸಿದರು.
“ರಾಹುಲ್ ಗಾಂಧಿ ಮತ್ತು ಅವರ ಪಕ್ಷ ಮಹಿಳಾ ವಿರೋಧಿಗಳು. ರಾಹುಲ್ ಗಾಂಧಿ ಮಹಿಳಾ ಸಬಲೀಕರಣದ ಪ್ರಜ್ಞಾಪೂರ್ವಕ ವಿರೋಧಿ” ಎಂದು ಅವರು ಹೇಳಿದರು.
https://x.com/ANI/status/2126683963980922891?s=20
ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಐತಿಹಾಸಿಕ ಹೆಜ್ಜೆಯಾಗಿದ್ದು, ಈ ಪ್ರಸ್ತಾವನೆಗೆ ವಿರೋಧ ಪಕ್ಷಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ವೋಟ್ ಚೋರಿ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಸವಾಲು
ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಅವರ ನಿರಂತರ ಆರೋಪಗಳ ಬಗ್ಗೆಯೂ ಬಿಜೆಪಿ ಸಂಸದ ಪ್ರಶ್ನೆಗಳನ್ನು ಎತ್ತಿದರು. ಚುನಾವಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆರೋಪ ಮಾಡುವ ಮೊದಲು ಸೂಕ್ತ ಸಾಕ್ಷ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ರಾಹುಲ್ ಗಾಂಧಿ ನೀಡಿದ್ದ ಪ್ರಸ್ತುತಿಗಳು ಹಾಗೂ ಬ್ರೆಜಿಲ್ ಮೂಲದ ಮತದಾರರೊಬ್ಬರ ಹೆಸರು ಸಂಬಂಧಿಸಿದ ವಿವಾದವನ್ನು ಉಲ್ಲೇಖಿಸಿದ ಅವರು, ಪರಿಶೀಲಿಸದ ಮಾಹಿತಿಯ ಆಧಾರದಲ್ಲಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಾಡಿರುವ ಆರೋಪಗಳಿಗೂ ಸಾಕ್ಷ್ಯ ಒದಗಿಸುವಂತೆ ಸವಾಲು ಹಾಕಿದರು.
2024ರ ಲೋಕಸಭಾ ಚುನಾವಣೆಯೇ ನಕಲಿ ಎಂದು ಹೇಳುತ್ತಿರುವ ರಾಹುಲ್ ಗಾಂಧಿ, ಅದೇ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿರುವುದನ್ನು ರವಿಶಂಕರ್ ಪ್ರಸಾದ್ ಪ್ರಶ್ನಿಸಿದರು.
“2024ರ ಚುನಾವಣೆ ನಕಲಿಯಾಗಿದ್ದರೆ, ಮೋದಿ ಅವರು ನಕಲಿ ಪ್ರಧಾನಿಯಾಗುತ್ತಾರೆ. ಅದೇ ಚುನಾವಣೆಯಲ್ಲಿ ನೀವೂ ಗೆದ್ದಿದ್ದೀರಿ. ಹಾಗಾದರೆ ನೀವು ಏಕೆ ರಾಜೀನಾಮೆ ನೀಡಬಾರದು?” ಎಂದು ಪ್ರಶ್ನಿಸಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದನ್ನು ನಿಲ್ಲಿಸಿ, ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಗೌರವಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ರವಿಶಂಕರ್ ಪ್ರಸಾದ್ ಸಲಹೆ ನೀಡಿದರು.