ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ನಿರ್ದೇಶಕ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ‘ದಾದಾ ಆನ್ ಹಾಲಿಡೇ’ ಎಂದು ಹೆಸರಿಡಲಾಗಿದೆ. ಚಿತ್ರದ ಶೀರ್ಷಿಕೆ ಹಾಗೂ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ಬಳಿಕ ಸುದೀಪ್ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ನವೆಂಬರ್ 28ರಂದು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಟೈಟಲ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಾಗಿದೆ.
‘ದಾದಾ ಆನ್ ಹಾಲಿಡೇ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲೇ 2.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. #DadaOnHoliday ಹ್ಯಾಶ್‌ಟ್ಯಾಗ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಅಭಿಮಾನಿಗಳು ಕಿಚ್ಚನ ಹೊಸ ಗೆಟಪ್‌ನ ಫ್ಯಾನ್ ಎಡಿಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸುದೀಪ್ ಅವರ ವಿಭಿನ್ನ ಲುಕ್ ಮತ್ತು ನಿರ್ದೇಶಕ ಪ್ರೇಮ್ ಅವರ ನಿರೂಪಣಾ ಶೈಲಿ ಹೇಗಿರಲಿದೆ ಎಂಬ ಚರ್ಚೆಯೂ ಅಭಿಮಾನಿಗಳ ವಲಯದಲ್ಲಿ ಜೋರಾಗಿದೆ.
ಇನ್ನು ಚಿತ್ರದ ಕಥೆ ಮತ್ತು ವಿಶೇಷತೆಗಳ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರೇಮ್, ಸುದೀಪ್ ಅವರ ವ್ಯಕ್ತಿತ್ವವೇ ಸಿನಿಮಾದ ಕಥೆಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದ್ದಾರೆ. ಅವರ ನಿಜ ಜೀವನದ ಗುಣಗಳನ್ನು ಆಧರಿಸಿ ವಿಶೇಷ ಹಾಡೊಂದನ್ನು ರಚಿಸಲಾಗಿದ್ದು, ಅದು ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.
“ಈ ಸಿನಿಮಾದಲ್ಲಿ ಮಚ್ಚು-ಕೊಚ್ಚು, ಲವ್-ಗೋಳು ಯಾವುದೂ ಇರುವುದಿಲ್ಲ. ಸಂಗೀತ, ಕುಟುಂಬ ಮತ್ತು ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಎಲ್ಲರ ಮನಸ್ಸಿಗೆ ತಟ್ಟುವಂತಹ ಕಥೆಯನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಿ, ಮುಂದಿನ ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ಚಿತ್ರವನ್ನು ತೆರೆಗೆ ತರಲು ಯೋಜಿಸಿದ್ದೇವೆ” ಎಂದು ಪ್ರೇಮ್ ಹೇಳಿದ್ದಾರೆ.
https://x.com/DKShivakumar/status/2126367388665049416?s=20
ಕಿಚ್ಚನ ಹೊಸ ಸಿನಿಮಾಗೆ ಸಿಎಂ ಡಿಕೆಶಿ ಶುಭ ಹಾರೈಕೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. “ಇಂದು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ನಡೆದ ಖ್ಯಾತ ನಟ ಕಿಚ್ಚ ಸುದೀಪ್ ಅಭಿನಯದ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ನೂತನ ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ನಿರ್ದೇಶಕ ಪ್ರೇಮ್ ಕೂಡ ತಮ್ಮ ಮುಂದಿನ ಸಿನಿಮಾ ಪ್ರಯಾಣದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. “ಪ್ರತಿಯೊಂದು ಚಲನಚಿತ್ರವೂ ಒಂದು ಹೊಸ ಪಯಣ. ನಿಮ್ಮ ಅಪಾರ ಪ್ರೀತಿ, ಬೆಂಬಲ ಮತ್ತು ಆಶೀರ್ವಾದದೊಂದಿಗೆ ಕಿಚ್ಚ ಸುದೀಪ್ ಅವರೊಂದಿಗೆ ಕೈಗೊಂಡಿರುವ ನನ್ನ ಮುಂದಿನ ಚಲನಚಿತ್ರ ಪಯಣವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲ ನೀಡಿದ ಮುಖ್ಯಮಂತ್ರಿಗಳಿಗೂ ಧನ್ಯವಾದ ಅರ್ಪಿಸಿದ್ದಾರೆ.
‘ದಾದಾ ಆನ್ ಹಾಲಿಡೇ’ ಚಿತ್ರತಂಡ ಯಾರು?
ಆರುದ್ರ ಸಿನಿಮಾಸ್ ಹಾಗೂ ಪ್ರೇಮ್ ಫೀನಿಕ್ಸ್ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸುತ್ತಿವೆ. ಜೋಗಿ ಪ್ರೇಮ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರೂಪೇಶ್ ಕುಮಾರ್ ಜಿ, ಶಶಿ ಕಿರಣ್ ಆರ್ ಮತ್ತು ರಕ್ಷಿತಾ ಪ್ರೇಮ್ ನಿರ್ಮಾಣ ತಂಡದಲ್ಲಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದು, ಶೇಖರ್ ಚಂದ್ರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಶಿವಕುಮಾರ್ ಜೆ ಕಲಾ ನಿರ್ದೇಶನ ಹಾಗೂ ಸಂಕೇತ್ ಆಚಾರಗ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಭಿಜಿತ್ ಮಹೇಶ್ ಸಂಭಾಷಣೆ ಬರೆಯುತ್ತಿದ್ದಾರೆ.
ಮಾಸ್ ಲುಕ್‌ನಲ್ಲಿ ಕಿಚ್ಚ ಸುದೀಪ್
ಬಿಡುಗಡೆಯಾಗಿರುವ ಟೈಟಲ್ ಟೀಸರ್‌ನಲ್ಲಿ ಕಿಚ್ಚ ಸುದೀಪ್ ವಿಭಿನ್ನ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಮತ್ತು ಹಾಸ್ಯದ ಮಿಶ್ರಣದೊಂದಿಗೆ ಸಿನಿಮಾ ಮೂಡಿಬರಲಿದೆ ಎಂಬ ಸುಳಿವು ಟೀಸರ್‌ನಲ್ಲಿ ಸಿಕ್ಕಿದೆ. ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿರಲಿವೆ ಎಂದು ಚಿತ್ರತಂಡ ತಿಳಿಸಿದೆ.
ಇನ್ನು ಟೀಸರ್‌ನಲ್ಲಿ ನಾಯಕ ಯಾರು ಎಂಬ ಪ್ರಶ್ನೆಗೆ ನಿರ್ದೇಶಕರು ನೀಡಿರುವ ವಿಭಿನ್ನ ಉತ್ತರ ಕೂಡ ಗಮನ ಸೆಳೆದಿದೆ. ಆದರೆ ಚಿತ್ರದ ಕಥೆ, ನಾಯಕಿಯರು ಹಾಗೂ ಇತರ ಪಾತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಮತ್ತೆ ಒಂದಾದ ಪ್ರೇಮ್-ಸುದೀಪ್ ಕಾಂಬಿನೇಷನ್
ಈ ಹಿಂದೆ ಶಿವರಾಜ್‌ಕುಮಾರ್ ಮತ್ತು ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದರು. ಬಳಿಕ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಪೂರ್ಣ ಪ್ರಮಾಣದ ಸಿನಿಮಾಗಾಗಿ ಒಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ, ದಾದಾ ಆನ್ ಹಾಲಿಡೇ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಬಿಡುಗಡೆಯೊಂದಿಗೆ ಸಿನಿಮಾದ ಪ್ರಚಾರಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ.