ಮುಂಬೈ: ಇತ್ತೀಚೆಗೆ ತೆರೆಕಂಡ ‘ರಾಮಾಯಣ’ (Ramayana) ಚಿತ್ರದಲ್ಲಿ ರಾವಣನ ಪಾತ್ರವನ್ನು ವೈಭವೀಕರಿಸಲಾಗಿದೆ ಎಂಬ ಆರೋಪಗಳಿಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದಲ್ಲಿ ರಾವಣನನ್ನು ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ತೋರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೂರದರ್ಶನ (DD News) ಸಂದರ್ಶನದಲ್ಲಿ ಮಾತನಾಡಿರುವ ನಮಿತ್ ಮಲ್ಹೋತ್ರಾ, ನಾವು ರಾವಣನನ್ನು ಒಳ್ಳೆಯವನಾಗಿ ಬಿಂಬಿಸಿಲ್ಲ. ಯಶ್ ಒಬ್ಬ ಸೂಪರ್‌ಸ್ಟಾರ್ ಆಗಿರುವುದರಿಂದ ಜನರಿಗೆ ಅವರ ಅಭಿನಯ ಇಷ್ಟವಾಗಿದೆ ಅಷ್ಟೇ. ಇಡೀ ಸಿನಿಮಾದಲ್ಲಿ ರಾವಣ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಆತ ಎಷ್ಟು ದಾಂಧಲೆ ಮತ್ತು ಆತಂಕ ಸೃಷ್ಟಿಸಿದನೆಂದರೆ, ಆ ಆತಂಕವನ್ನು ಕೊನೆಗಾಣಿಸಲು ಪ್ರಭು ಶ್ರೀರಾಮನೇ ಬರಬೇಕಾಯಿತು ಎಂದು ಹೇಳಿದ್ದಾರೆ.
ದಶಾನನನ ರೂಪಾಂತರ ಮತ್ತು ವರದಾನದ ಪ್ರಶ್ನೆ ಸಾರ್ವತ್ರಿಕ ಕಥೆಯನ್ನು ಪ್ರೇಕ್ಷಕರ ಮುಂದಿಡುವುದು ಮತ್ತು ರಾವಣನ ಪಾತ್ರದ ರೂಪಾಂತರವನ್ನು ತೋರಿಸುವುದು ನಮ್ಮ ಉದ್ದೇಶವಾಗಿತ್ತೇ ಹೊರತು, ಆತನ ಕೃತ್ಯಗಳನ್ನು ಹೊಗಳುವುದಲ್ಲ ಎಂದು ನಮಿತ್ ವಿವರಿಸಿದ್ದಾರೆ. ಬಾಲ್ಯದಿಂದ ದಶಾನನನಾಗಿ ಆತ ಹೇಗೆ ಬೆಳೆದ ಎಂಬ ಪ್ರಯಾಣವನ್ನು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ. ರಾವಣ ಅಷ್ಟೊಂದು ಕೆಟ್ಟವನಾಗಿದ್ದರೆ, ಬ್ರಹ್ಮ ಮತ್ತು ಶಿವ ದೇವರುಗಳು ಆತನಿಗೆ ಏಕೆ ವರ ನೀಡಿದರು? ಸ್ವತಃ ದೇವರೇ ವರ ನೀಡಿದ್ದಾನೆ ಎಂದರೆ ಆತ ಏನೋ ಸಾಧನೆ ಮಾಡಿರಬೇಕು ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.
ರಾಮಾಯಣ ಭಾಗ-2 ಬಿಡುಗಡೆ ಮುಂದೂಡಿಕೆ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಈ ನಡುವೆ, ‘ರಾಮಾಯಣ: ಭಾಗ-2’ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಹಿಂದೆ 2027ರ ದೀಪಾವಳಿಗೆ ಬಿಡುಗಡೆಯಾಗಬೇಕಿದ್ದ ಎರಡನೇ ಭಾಗವು, ಇದೀಗ 2028ರ ದೀಪಾವಳಿ ವೇಳೆಗೆ ಚಿತ್ರಮಂದಿರಗಳಿಗೆ ಬರಲಿದೆ.