ಬೆಂಗಳೂರು: ಆರ್‌ಎಸ್‌ಎಸ್ ನವರು ನೋಂದಣಿ ಮಾಡಿಸಲು ರೆಡಿಯಾಗಿ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ.ರವಿ, ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡಲು ಆಗಿಲ್ಲ, ನಿಮ್ಮಿಂದ ಆಗುತ್ತಾ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿ.ಟಿ.ರವಿ, ನೆಹರು ಪ್ರಧಾನಿ ಆಗಿದ್ದರು, ಅವರು ಆರ್‌ಎಸ್‌ಎಸ್ ವಿರೋಧ ಮಾಡಿದ್ರು. ಆರ್‌ಎಸ್‌ಎಸ್ ಇನ್ನೂ ಇದೆ. ನೆಹರು ಇಲ್ಲ. ಇಂದಿರಾಗಾಂಧಿ ತುರ್ತುಸ್ಥಿತಿ ಹೇರಿದ್ರು. ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ರು. ಇಂದಿರಾಗಾಂಧಿ ಇಲ್ಲ. ಆರ್‌ಎಸ್‌ಎಸ್ ಇನ್ನೂ ಇದೆ. ಪ್ರಿಯಾಂಕ್ ಅವರೇ ನೀವು ನಿನ್ನೆ ಮೊನ್ನೆ ಹೋಂ ಮಿನಿಸ್ಟರ್ ಆಗಿರೋದು. ನಿಮ್ಮ ಅಪ್ಪ ನಿಮಗಿಂತ ಮುಂಚೆ ಗೃಹ ಸಚಿವರು ಆಗಿದ್ರು. ನಿಮ್ಮಪ್ಪನಿಂದ ಏನು ಮಾಡಲು ಆಗಿಲ್ಲ ಇನ್ನು ನಿಮ್ಮಿಂದ ಆಗುತ್ತಾ? ಎಂದು ಕಿಡಿಕಾರಿದರು.
ನೀವು ಸರ್ವಾಧಿಕಾರಿ ಅಲ್ಲ. ಇದು ನಿಮ್ಮ ಪಕ್ಷದ ಕೊನೆ ದಿನಗಳು. ನಿಮ್ಮ ಅಪ್ಪನ ಆಣೆ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರಲ್ಲ. ಆರ್‌ಎಸ್‌ಎಸ್ ರಾಷ್ಟ್ರದ ಕೆಲಸ, ವ್ಯಕ್ತಿಗೆ ಸಂಸ್ಕಾರ ಕೊಡುವ ಕೆಲಸ ಮಾಡುತ್ತಿದೆ. ನೋಂದಣಿ ಮಾಡೋಕೆ ಅದು ಸಂಘ ಅಲ್ಲ. ಸಮಾಜವನ್ನ ಸಂಘಟಿಸುವ ಸಂಘಟನೆ ಅದು. ನಿಮಗೆ ಗೃಹ ಸಚಿವರಾಗಿ ಬೇರೆ ಕೆಲಸ ಇದೆ. ಅದನ್ನ ನೋಡಿ ಎಂದು ಟಾಂಗ್ ನೀಡಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ. ದರೋಡೆ, ಡ್ರಗ್ಸ್, ಹೆಣ್ಣು ಮಕ್ಕಳು ನಾಪತ್ತೆ ಈ ಬಗ್ಗೆ ಗಮನಹರಿಸಿ. ಆರ್‌ಎಸ್‌ಎಸ್‌ನಿಂದ ಅಪಾಯ ಇಲ್ಲ. ಇಲ್ಲೇ ಇದ್ದು ಬಾಂಬ್ ತಯಾರು ಮಾಡೋರ ಕಡೆ ಗಮನ ಕೊಡಿ ಎಂದು ಗುಡುಗಿದರು.
ನೀವು ಹೋಂ ಮಿನಿಸ್ಟರ್, ಹೋಂ ಮಿನಿಸ್ಟರ್ ರೀತಿ ವರ್ತನೆ ಮಾಡಿ, ಗೂಂಡಾ ರೀತಿ ವರ್ತನೆ ಮಾಡಬೇಡಿ. ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿ ಮೆರೆದವರಿಗೆ ಇಂದು ಪಶ್ಚಿಮ ಬಂಗಾಳದಲ್ಲಿ ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಆ ಭಯದಿಂದ ಎಚ್ಚರಿಕೆ ವಹಿಸಿ. ನೀವು ಮಾಡಬೇಕಾದ ಕೆಲಸ ಬೇರೆ ಇದೆ ಅದನ್ನ ಮಾಡಿ. ಬೆಂಕಿ ಹಚ್ಚೋ ಕೆಲಸ ಮಾಡಬೇಡಿ. ಬೆಂಕಿ ಆರಿಸೋ ಕೆಲಸ ಮಾಡಿ. ಬೆಂಕಿ ಹಚ್ಚೋಕೆ ಹೋದ್ರೆ ಆ ಬೆಂಕಿ ನಿಮ್ಮನ್ನು ಸುಡುತ್ತದೆ ಎಂದು ಕಿಡಿಕಾರಿದ್ದಾರೆ.