ಮುಂಬೈ: ಸಾರ್ವಜನಿಕ ಉದ್ಯಾನವನದಲ್ಲಿ ನೆಮ್ಮದಿಯಾಗಿ ಫೋಟೋ ತೆಗೆಯುತ್ತಿದ್ದ ಜೋಡಿಗೆ ಕೆಲ ಬಾಲಕರ ಗುಂಪು ಕಿರುಕುಳ ನೀಡಿದೆ. ಅಸಭ್ಯ ಕಾಮೆಂಟ್‌ಗಳನ್ನು ಮಾಡಿದ್ದಲ್ಲದೆ, ಪ್ರಶ್ನಿಸಿದ ಜೋಡಿ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ, ಬೆನ್ನಟ್ಟಿದ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಎಂಟು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.
ನವೆಂಬರ್ 20ರಂದು ಕುರ್ಳಾದ ಫೀನಿಕ್ಸ್ ಮಾಲ್ ಸಮೀಪದ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಜೋಡಿಗಳು ಫೋಟೋ ತೆಗೆಯುತ್ತಿದ್ದ ವೇಳೆ ಅಲ್ಲಿದ್ದ ಬಾಲಕರು ಅಸಭ್ಯವಾಗಿ ಮಾತನಾಡಿದ್ದಾರೆ. ಇದನ್ನು ದಂಪತಿ ಪ್ರಶ್ನಿಸಿದಾಗ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೊಣ್ಣೆಗಳಿಂದ ಹಲ್ಲೆ, ಕಾಲಿನಿಂದ ಒದ್ದು ಹಿಂಬಾಲಿಸಿದ ಗುಂಪು
ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕರು ದೊಣ್ಣೆಯಂತಿರುವ ವಸ್ತುಗಳಿಂದ ಥಳಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಪುರುಷನ ಮೇಲೆ ಕಾಲಿನಿಂದ ಒದ್ದು, ಮುಷ್ಟಿಯಿಂದ ಹೊಡೆದಿರುವ ದೃಶ್ಯಗಳೂ ಇವೆ. ಹಲ್ಲೆ ನಡೆಸಿದ ಬಳಿಕ ಮೆಟ್ಟಿಲುಗಳ ಬಳಿ ಸ್ವಲ್ಪ ದೂರ ಬೆನ್ನಟ್ಟಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಪೊಲೀಸರ ಪ್ರಕಾರ, ಹಲ್ಲೆ ನಡೆಸಿದ ಗುಂಪಿನಲ್ಲಿ 8ರಿಂದ 10 ಬಾಲಕರಿದ್ದರು. ಜೋಡಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಂಟು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ಡಿಸಿಪಿ ಗಣೇಶ್ ಶಿಂಧೆ ತಿಳಿಸಿದ್ದಾರೆ. ಆರೋಪಿಗಳನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಬಾಲ ನ್ಯಾಯ ಮಂಡಳಿ (Juvenile Justice Board) ಮುಂದೆ ಹಾಜರುಪಡಿಸಲಾಗುತ್ತದೆ.
ಯಾವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು?
ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಾನೂನುಬಾಹಿರ ಗುಂಪುಗೂಡುವಿಕೆ, ಅಪಾಯಕಾರಿ ವಸ್ತುಗಳೊಂದಿಗೆ ಗುಂಪಿನ ಸದಸ್ಯರಾಗಿರುವುದು, ಗಾಯಗೊಳಿಸುವುದು, ಅವಮಾನಿಸುವುದು ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆಗೆ ಧಾರ್ಮಿಕ ಬಣ್ಣ ನೀಡಿದ ಕಿರಿತ್ ಸೋಮಯ್ಯ
ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರಿತ್ ಸೋಮಯ್ಯ ಅವರು ವಿಡಿಯೋದಲ್ಲಿರುವ ಜೋಡಿಗಳು ಹಿಂದೂಗಳು ಎಂದು ಗುರುತಿಸಿ, ಆರೋಪಿಗಳನ್ನು ‘ಮುಸ್ಲಿಂ ಮತಾಂಧರು’ ಎಂದು ಕರೆದಿದ್ದಾರೆ.
ನವೆಂಬರ್ 21ರಂದು ಎಕ್ಸ್‌ನಲ್ಲಿ ಮರಾಠಿ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಅವರು, ಘಾಟ್ಕೋಪರ್‌ನ ಫೀನಿಕ್ಸ್ ಮಾಲ್ ಬಳಿ ಯುವ ಹಿಂದೂ ಸ್ನೇಹಿತರ ಮೇಲೆ ಮುಸ್ಲಿಂ ಮತಾಂಧರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಐದು ಬಾಲಕರ ಪೋಷಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿರುವ ಅವರು, ಸಂಜೆ 4 ಗಂಟೆಗೆ ತಾವು ಆ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಭದ್ರತೆ ವಿಚಾರವಾಗಿ ಆಕ್ರೋಶ, ಉದ್ಯಾನವನದಲ್ಲಿ ಪ್ರತಿಭಟನೆ
ಶಿವಸೇನೆ (ಯುಬಿಟಿ) ನಾಯಕ ಇಂತೇಖಾಬ್ ಫಾರೂಕಿ ಕೂಡ ಘಟನೆಯನ್ನು ಖಂಡಿಸಿದ್ದು, ಇಂತಹ ಹಲ್ಲೆಗಳು ಖಂಡನೀಯ ಎಂದು ಹೇಳಿದ್ದಾರೆ.ಇತ್ತ ಘಟನೆಯನ್ನು ಖಂಡಿಸಿ ಬಜರಂಗದಳದ ಕಾರ್ಯಕರ್ತರು ಉದ್ಯಾನವನಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಉದ್ಯಾನವನದ ವಾಚ್‌ಮನ್‌ನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು, ಜನರಿಗೆ ಸುರಕ್ಷತೆ ಒದಗಿಸಲು ಸಾಧ್ಯವಾಗದಿದ್ದರೆ ಉದ್ಯಾನವನವನ್ನು ತೆರೆದಿಡುವುದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಉದ್ಯಾನವನದ ಭದ್ರತಾ ವ್ಯವಸ್ಥೆಯನ್ನು ಸುಧಾರಿಸದಿದ್ದರೆ ತಾವೇ ಕ್ರಮ ಕೈಗೊಳ್ಳುವುದಾಗಿ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
Disclaimer: ಈ ಸುದ್ದಿಯಲ್ಲಿರುವ ಹಲ್ಲೆ ಘಟನೆಗೆ ಸಂಬಂಧಿಸಿದ ಮಾಹಿತಿ ಪೊಲೀಸ್ ಹೇಳಿಕೆಗಳು, ದೂರುಗಳು ಹಾಗೂ ಮಾಧ್ಯಮ ವರದಿಗಳನ್ನು ಆಧರಿಸಿದೆ. ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಆರೋಪಿಗಳ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಅವರು ನಿರಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಗುರುತುಗಳಿಗೆ ಸಂಬಂಧಿಸಿದ ಹೇಳಿಕೆಗಳು ಸಂಬಂಧಪಟ್ಟ ರಾಜಕೀಯ ನಾಯಕರ ಆರೋಪಗಳಾಗಿದ್ದು, ಅವು ಸ್ವತಂತ್ರವಾಗಿ ದೃಢಪಟ್ಟ ಮಾಹಿತಿಯಲ್ಲ.