ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್.) ನ ವಾರ್ಷಿಕ ಅಖಿಲ ಭಾರತ ಪ್ರಾಂತ ಪ್ರಚಾರಕರ ಸಭೆ ಈ ವರ್ಷ ಜುಲೈ 10 ರಿಂದ 12 ರವರೆಗೆ ಬೆಳಗಾವಿಯಲ್ಲಿ ನಡೆಯಲಿದೆ.
ಆರ್.ಎಸ್.ಎಸ್. ರಾಷ್ಟ್ರೀಯ ಮಾಧ್ಯಮ ಮತ್ತು ಪ್ರಚಾರ ಉಸ್ತುವಾರಿ ಸುನಿಲ್ ಅಂಬೇಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ವಾರ್ಷಿಕ ಸಭೆಯಲ್ಲಿ ದೇಶಾದ್ಯಂತದ ಇರುವ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಬಿಜೆಪಿ ಸೇರಿದಂತೆ ಆರ್.ಎಸ್.ಎಸ್. ಪ್ರೇರಿತ 32 ಸಂಘಟನೆಗಳ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸರಸಂಘ ಚಾಲಕ ಡಾ. ಮೋಹನ್ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿರುವರು. ಜುಲೈ 6ರಂದೇ ಮೋಹನ್ ಭಾಗವತ್ ಬೆಳಗಾವಿಗೆ ಆಗಮಿಸಲಿದ್ದಾರೆ. ಮೂರು ದಿನಗಳ ಸಭೆಯಲ್ಲಿ ಆರ್.ಎಸ್.ಎಸ್. ಶಾಖೆಗಳ ಕಾರ್ಯದ ಪರಿಶೀಲನೆ ಶಾಖೆಗಳ ಸಂಖ್ಯೆ ಹೆಚ್ಚಳ ಬಗ್ಗೆ ಚರ್ಚಿಸಲಾಗುವುದು.