ಸಾಗರ: ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ನಗದು ಹಣವನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು ₹2,29,900 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ ಹಾಗೂ ದೂರು
ಅಣಲೆಕೊಪ್ಪ ನಿವಾಸಿ ಉಮಾ ಕೋಂ ಲೇಟ್ ಬಂಗಾರಪ್ಪ ಎಂಬುವರು ತಮ್ಮ ಮನೆಯ ಗಾಡ್ರೇಜ್ ಆಲ್ಮೆರಾದಲ್ಲಿ ₹2,54,000 ನಗದನ್ನು ಇಟ್ಟಿದ್ದರು. ಸೆಪ್ಟೆಂಬರ್ 6, 2026 ರಂದು ಅವರ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಪಾಂಡುರಂಗ ಎಂಬಾತ ಈ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದನು. ಈ ಕುರಿತು ನೀಡಿದ ದೂರಿನನ್ವಯ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ (ಕ್ರೈಂ ಸಂ: 175/2026, ಕಲಂ 305, 306 ಬಿಎನ್‌ಎಸ್) ಪ್ರಕರಣ ದಾಖಲಾಗಿತ್ತು.
ಪೊಲೀಸ್ ತನಿಖೆ ಹಾಗೂ ಆರೋಪಿಯ ಬಂಧನ
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಬಿ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ ಹಾಗೂ ಸಾಗರ ಉಪವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚನ್ನಕಪ್ರಸಾದ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಸಾಗರ ಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಪುಲ್ಲಯ್ಯ ರಾಥೋಡ್, ಪಿಎಸ್‌ಐ ಶಾಂತರಾಜ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ವಿಶ್ವನಾಥ් ಮತ್ತು ನರೇಂದ್ರ ಅವರನ್ನೊಳಗೊಂಡ ತನಿಖಾ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರ ತಾಲೂಕಿನ ಹಾತ್ ಕಂಬಾ ಗ್ರಾಮದ ನಿವಾಸಿ ಪಾಂಡುರಂಗ (35) ಎಂದು ಗುರುತಿಸಲಾಗಿದೆ. ಪ್ರಸ್ತುತ ಶಿವಮೊಗ್ಗದ ಎಸ್.ಎನ್. ನಗರದಲ್ಲಿ ವಾಸವಿದ್ದ ಈತನಿಂದ ಕಳವು ಮಾಡಲಾಗಿದ್ದ ಹಣದಲ್ಲಿ ₹2,29,900 ನಗದನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಹಣ ವಶಪಡಿಸಿಕೊಂಡ ಸಾಗರ ಪೇಟೆ ಪೊಲೀಸ್ ತಂಡದ ಮಿಂಚಿನ ಕಾರ್ಯಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಅಭಿನಂದಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..