ವಿಧಾನಪರಿಷತ್ತು : ರಾಜ್ಯ ಬರ ಎದುರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆ ಮಾಡಬೇಕಾದ 2186.20 ಕೋಟಿ ರೂ. ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿ ಬರದ ಮೇಲಿನ ಚರ್ಚೆಯ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 5927 ಗ್ರಾಮ ಪಂಚಾಯತಿಗಳಿದ್ದು, ನಗರಪ್ರದೇಶ ಸಮೀಪ ಇರುವ ಪಂಚಾಯತಿಗಳು ತೆರಿಗೆ ಸಂಗ್ರಹಣೆಯಿಂದ ಸದೃಢವಾಗಿವೆ. ಆದರೆ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಪಂಚಾಯತಿಗಳು ಹಣವಿಲ್ಲದೆ ನಲುಗಿವೆ. ಕೇಂದ್ರ ಸರ್ಕಾರ ಕೊಡಬೇಕಾದ ಹಣವನ್ನೇ ಕೊಡುತ್ತಿಲ್ಲ ಎಂದರು.
ಈ ಬಗ್ಗೆ ತಾವು ದೆಹಲಿಗೆ ಹೋಗಿದ್ದಾಗ ಕೇಂದ್ರ ಸಚಿವರುಗಳಾದ ಶಿವರಾಜ್ ಸಿಂಗ್ ಚವ್ಹಾಣ್, ಲಲನ್ ಸಿಂಗ್ ಹಾಗೂ ವಿ.ಸೋಮಣ್ಣ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದರೂ ಹಣ ಬಿಡುಗಡೆ ಮಾಡಿಲ್ಲ, ತಾಂತ್ರಿಕ ಕಾರಣ ಮುಂದಿಟ್ಟು ತಡೆ ಹಿಡಿಯಲಾಗಿದೆ. ಈ ಬಗ್ಗೆ ಕೇಳುವ ಧೈರ್ಯ ಇದೆಯೇ, ಸಂಸದರು ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರು ಪೂರೈಕೆಗೆ ಹಣಕಾಸಿನ ಕೊರತೆ ಇಲ್ಲ:
ನೀರು ಜೀವಜಲ, ಪ್ರತಿಯೊಬ್ಬರಿಗೂ ನೀರು ಪೂರೈಸಬೇಕಾದ್ದು, ಆಯಾ ಸರ್ಕಾರ ಮತ್ತು ವ್ಯವಸ್ಥೆಯ ಜವಾಬ್ದಾರಿ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿದ್ದು, ಗ್ರಾಮೀಣ ಭಾಗಕ್ಕೆ ನೀರು ಪೂರೈಸುವುದು ಸವಾಲಾಗಿದೆ. ಆದರೂ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ನೀರು ಪೂರೈಕೆಗೆ ಹಣಕಾಸಿನ ಕೊರತೆ ಇಲ್ಲ ಎಂದರು.
ಬರ ಪರಿಸ್ಥಿತಿ ತಲೆದೋರಬಹುದೆಂದು ಮೊದಲೇ ಗ್ರಾಮೀಣ ಕುಡಿಯುವ ನೀರಿಗೆ 117 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಇದರ ಜೊತೆಗೆ ಮುಖ್ಯಮಂತ್ರಿಯವರು ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ 189 ಕೋಟಿ ರೂ. ಘೋಷಿಸಿದ್ದು, ಕುಡಿಯುವ ನೀರಿಗೆ 306 ಕೋಟಿ ರೂ. ಲಭ್ಯವಿದೆ ಎಂದರು.
ಸೆಪ್ಟೆಂಬರ್ ನಲ್ಲಿ ಕೂಡ ವಾಡಿಕೆಯಂತೆ ಮಳೆಯಾಗದ ಕಾರಣ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಇರುವ ಗ್ರಾಮಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕ್ರಿಯಾ ಯೋಜನೆ ರೂಪಿಸಿ ತ್ವರಿತವಾಗಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜೊತೆಗೆ 799 ಗ್ರಾಮಗಳಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಇದ್ದು, ಖಾಸಗಿ ಕೊಳವೆಬಾವಿ, ತೆರೆದ ಬಾವಿಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.