ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಭಿನ್ನಮತ ಈಗ ಬಹಿರಂಗವಾಗಿದ್ದು, ಸ್ವಪಕ್ಷೀಯ ನಾಯಕರ ವಿರುದ್ಧವೇ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಗಂಭೀರ ಲಂಚದ ಆರೋಪ ಮಾಡಿ ಬಾಂಬ್ ಸಿಡಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಪಿಎ ವಿರುದ್ಧ ಲಂಚದ ಆರೋಪ:
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರೇಶ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕ ಜಿ.ಡಿ. ಮಂಜುನಾಥ್ ಹಾಗೂ ನಾಯಕ ಕಲಗೋಡು ರತ್ನಾಕರ್ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸಿದರು. "ಸಚಿವರ ಪಿಎ ಕಚೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಬೆದರಿಸಿ 5 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಲಂಚದ ಬೇಡಿಕೆ ಇಡುತ್ತಿದ್ದಾರೆ. ಸೂಡಾ ಆಯುಕ್ತರಿಗೇ ನೇರವಾಗಿ 25 ಲಕ್ಷ ರೂಪಾಯಿ ಕೊಡುವಂತೆ ಪೀಡಿಸಿದ್ದಾರೆ. ಕಾಂಗ್ರೆಸ್‌ಗೆ ಯಾವುದೇ ಕೊಡುಗೆ ನೀಡದ ಇಂತಹ ವ್ಯಕ್ತಿಗಳಿಂದ ಪಕ್ಷದ ಹೆಸರು ಹಾಳಾಗುತ್ತಿದೆ" ಎಂದು ಕಿಡಿಕಾರಿದರು.
"ಕಾಂಗ್ರೆಸ್‌ನ ಗಂಧ-ಗಾಳಿ ಗೊತ್ತಿಲ್ಲದ ವ್ಯಕ್ತಿ ಆಡಳಿತ ನಡೆಸುತ್ತಿದ್ದಾರೆ":
ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ತೀವ್ರ ಏಕವಚನದಲ್ಲೇ ಆಕ್ರೋಶ ಹೊರಹಾಕಿದ ಸುಂದರೇಶ್, "ಜೆಡಿಎಸ್‌ನಿಂದ ಬಂದಿರುವ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಗಂಧ-ಗಾಳಿಯೇ ತಿಳಿದಿಲ್ಲ. ಅವರು ಕೆಲವೇ ಕೆಲವು ದಡ್ಡರು ಹಾಗೂ ಈಡಿಯಟ್‌ಗಳ ಮಾತು ಕೇಳಿಕೊಂಡು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಕ್ಷಕ್ಕೋಸ್ಕರ ರಕ್ತ ಬೆವರು ಹರಿಸಿದ ಸತ್ಯವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ" ಎಂದು ಆರೋಪಿಸಿದರು.
ಜಿಲ್ಲಾ ಅಧ್ಯಕ್ಷರ ಆಯ್ಕೆಗೂ ವಿರೋಧ – ಹೈಕಮಾಂಡ್‌ಗೆ ಎಚ್ಚರಿಕೆ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹೆಚ್.ಸಿ. ಯೋಗೀಶ್ ಅವರನ್ನು ನೇಮಕ ಮಾಡಲು ಹೊರಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಯೋಗೀಶ್ ಆ ಹುದ್ದೆಗೆ ಅರ್ಹರಲ್ಲ ಎಂದರು. ಜೊತೆಗೆ, ಜಿಲ್ಲೆಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಸೇವಾದಳದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರನ್ನು ಜಿಲ್ಲೆಯಿಂದ ಓಡಿಸುವುದಾಗಿ ಗುಡುಗಿದರು.
ಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ ಅವರು, "ಮಧು ಬಂಗಾರಪ್ಪ ನಮ್ಮನ್ನೇ ಟಾರ್ಗೆಟ್ ಮಾಡಲು ಹೊರಟರೆ ಮುಂಬರುವ ಚುನಾವಣೆಯಲ್ಲಿ ಸೊರಬ ಕ್ಷೇತ್ರ ಹಾಗೂ ಲೋಕಸಭೆಗೆ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಾವು ಸಿದ್ಧರಿದ್ದೇವೆ" ಎಂದು ಬಹಿರಂಗ ಸವಾಲು ಹಾಕಿದರು.
ಜಿಲ್ಲೆಯಲ್ಲಿ ನಡೆದಿರುವ ಈ ಎಲ್ಲಾ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಶೀಘ್ರವೇ ದೂರು ನೀಡುವುದಾಗಿ ಸುಂದರೇಶ್ ತಿಳಿಸಿದ್ದು, ಈ ಘಟನೆ ಶಿವಮೊಗ್ಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.