ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಭೂಮಾಪಕ, ಗ್ರಾಮ ಆಡಳಿತಾಧಿಕಾರಿ ಮತ್ತು ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಅ.24 ಮತ್ತು 25 ಹಾಗೂ ಉಳಿಕೆ ಮೂಲ ವೃಂದದ ಇಎಸ್ಐ- ನರ್ಸಿಂಗ್ ಅಧಿಕಾರಿ, ಫಾರ್ಮಸಿ ಅಧಿಕಾರಿ ಸೇರಿದಂತೆ ಇತರ ಹುದ್ದೆಗಳ ಪರೀಕ್ಷೆಗಳನ್ನು ಅ.26 ಮತ್ತು 27ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇತರ ಎಲ್ಲ ನೇಮಕಾತಿ ಪರೀಕ್ಷೆಗಳಿಗೆ ಇರುವ ಹಾಗೆ ಈ ಪರೀಕ್ಷೆಗಳಿಗೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ವೃಂದದ ಭೂಮಾಪಕ (190 ಹುದ್ದೆ), ಗ್ರಾಮ ಆಡಳಿತಾಧಿಕಾರಿ (67) ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಶಿಕ್ಷಕ (40 ಹುದ್ದೆ), ಉಳಿಕ ಮೂಲ ವೃಂದದ ಇಎಸ್ಐ-ನರ್ಸಿಂಗ್ ಅಧಿಕಾರಿ (90), ಫಾರ್ಮಸಿ ಅಧಿಕಾರಿ (98), ವಸತಿ ಶಾಲೆಗಳ ಶಿಕ್ಷಕರ (100) ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.
ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆಗಳು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳ (ಬಳ್ಳಾರಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ) ಒಟ್ಟು 237 ಕೇಂದ್ರಗಳಲ್ಲಿ ನಡೆಯಲಿವೆ. ಎಲ್ಲ ವಿವಿಧ ಪರೀಕ್ಷೆಗಳಿಗೂ ಸೇರಿ ಒಟ್ಟು 89,265 ಮಂದಿ ಪರೀಕ್ಷೆ ಬರೆಯಲಿದ್ದಾರೆ.
ಅ.26 ಮತ್ತು ಅ.27ರಂದು ನಡೆಯುವ ಉಳಿಕೆ ಮೂಲ ವೃಂದದ ಪರೀಕ್ಷೆಯನ್ನು ಬೆಂಗಳೂರು ಸೇರಿದಂತೆ ಬಳ್ಳಾರಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ, ಧಾರವಾಡ ಮತ್ತು ದಾವಣಗೆರೆ ಜಿಲ್ಲೆಗಳ ಒಟ್ಟು 119 ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಎಲ್ಲ ಪರೀಕ್ಷೆಗೂ ಸೇರಿದಂತೆ ಒಟ್ಟು 48,767 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರೀಕ್ಷಾ ಉಸ್ತುವಾರಿಗಳಾಗಿರುತ್ತಾರೆ ಎಂದು ಅವರು ವಿವರಿಸಿದ್ದಾರೆ.
ಪರೀಕ್ಷಾ ಮುನ್ನಾ ದಿನವಾದ ಶುಕ್ರವಾರ ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಮತ್ತು ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಎಲ್ಲ ಸಂಬಂಧಪಟ್ಟ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿ ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲಿಸಿದರು. ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಸಲು ಅವರು ಸೂಚನೆ ನೀಡಿದರು.